ಡೈಲಿ ವಾರ್ತೆ:10 ಸೆಪ್ಟೆಂಬರ್ 2023
ಕಾರವಾರ ಕಡಲ ತೀರಕ್ಕೆ ತೇಲಿಬಂದ ನೀಲಿ ತಿಮಿಂಗಿಲದ ಮೃತದೇಹ!
ಕಾರವಾರ: ಹೊನ್ನಾವರ ತಾಲೂಕಿನ ಮುಗಳಿ ಕಡಲ ತೀರಕ್ಕೆ ಅಳಿವಿನಂಚಿನಲ್ಲಿರುವ ಬೃಹತ್ ಗಾತ್ರದ ನೀಲಿ ತಿಮಿಂಗಿಲದ ಮೃತದೇಹ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ.
ತಿಮಿಂಗಿಲವು ಸುಮಾರು 35 ಮೀಟರ್ ಉದ್ದವಿದೆ. ಅದರ ಮೃತದೇಹ ದೊರೆತ ಬಗ್ಗೆ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಬಲೀನ್ ತಳಿಗೆ ಸೇರಿದ ತಿಮಿಂಗಿಲ ಇದಾಗಿದ್ದು ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಮೃತದೇಹವಿದೆ.
ತಿಮಿಂಗಿಲ ಮೃತಪಟ್ಟು ಹಲವು ದಿನಗಳಾಗಿವೆ. ಅಲೆಗಳ ರಭಸಕ್ಕೆ ಈಗ ದಡಕ್ಕೆ ತೇಲಿ ಬಂದಿದೆ. ಇದರ ಸಾವಿಗೆ ಕಾರಣ ಏನು ಎಂಬುದು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಸ್ಪಷ್ಟವಾಗಲಿದೆ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಸಮುದ್ರದ ತಣ್ಣನೆಯ ಪ್ರದೇಶದಿಂದ ಉಷ್ಣ ಪ್ರದೇಶಕ್ಕೆ ಸಂತಾನೋತ್ಪತ್ತಿ ವೇಳೆ ಈ ತಿಮಿಂಗಿಲಗಳು ಬರುತ್ತವೆ. ನೇತ್ರಾಣಿ ದ್ವೀಪ ಹಾಗೂ ಮುಗಳಿ ಕಡಲಧಾಮದ ಬಳಿ ಇವು ಹೆಚ್ಚಾಗಿ ವಲಸೆ ಬರುತ್ತವೆ. ಈ ವೇಳೆ ಶಾರ್ಕ್ ಮೀನುಗಳ ದಾಳಿಯಿಂದ ಮೃತಪಟ್ಟಿರುವ ಸಾಧ್ಯತೆಯೂ ಇರಬಹುದು ಎಂದು ಕಡಲಜೀವಶಾಸ್ತ್ರ ಸಂಶೋಧಕ ಪ್ರಕಾಶ್ ಮೇಸ್ತ ತಿಳಿಸಿದ್ದಾರೆ.