ಡೈಲಿವಾರ್ತೆ:15/ಮಾರ್ಚ್/2026

ಪ್ರೀತಿ-ವಿಶ್ವಾಸ ದುರುಪಯೋಗ: ಯುವತಿಯಿಂದ 14 ಲಕ್ಷ ರೂಪಾಯಿ ವಂಚನೆ: ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲು

ಉಡುಪಿ: ಪರಿಚಯ ಮತ್ತು ವಿಶ್ವಾಸವನ್ನು ದುರುಪಯೋಗ ಮಾಡಿಕೊಂಡು ಯುವತಿಯಿಂದ ಲಕ್ಷಾಂತರ ರೂಪಾಯಿ ಪಡೆದುಕೊಂಡಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.
ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಾರ್ಪಳ್ಳಿ, ಉಡುಪಿ ನಿವಾಸಿ ಮಹಿಮಾ (22) ಅವರು ನೀಡಿದ ದೂರಿನ ಪ್ರಕಾರ, ಶರತ್‌ ಎಂಬಾತನು ವಿವಿಧ ಸಮಸ್ಯೆಗಳನ್ನು ಹೇಳಿಕೊಂಡು ಅವರಿಂದ ಹಂತ ಹಂತವಾಗಿ ಹಣವನ್ನು ಪಡೆಯುತ್ತಿದ್ದನು. ಕೆಲವೊಮ್ಮೆ ₹500, ₹1000, ₹2000 ಹೀಗೆ ಹಣ ಪಡೆದು ಬಳಿಕ ಮರಳಿ ನೀಡದೇ ತಪ್ಪಿಸಿಕೊಳ್ಳುತ್ತಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದೇ ರೀತಿ ಫೆಬ್ರವರಿ 2026ರಲ್ಲಿ ಶರತ್‌ ದೂರವಾಣಿ ಮೂಲಕ ಮಹಿಮಾ ಅವರಿಗೆ ಕರೆ ಮಾಡಿ ₹15 ಲಕ್ಷ ಹಣ ಬೇಕೆಂದು ಕೇಳಿದ್ದಾನೆ. ಕಾರಣ ಕೇಳಿದಾಗ ತನ್ನ ತಂದೆಯ ಆರೋಗ್ಯ ಗಂಭೀರವಾಗಿದೆ ಎಂದು ಹೇಳಿದ್ದಾನೆ. ಮಹಿಮಾ ಅವರು ಅಷ್ಟು ಹಣ ಇಲ್ಲವೆಂದು ತಿಳಿಸಿದಾಗ, ಆರೋಪಿತನು ಅವಾಚ್ಯ ಶಬ್ದಗಳಿಂದ ಬೈದು, ಹಣ ನೀಡದಿದ್ದರೆ ಜೀವ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
ಈ ಬೆದರಿಕೆಯಿಂದ ಭಯಗೊಂಡ ಮಹಿಮಾ ಅವರು ಒತ್ತಾಯಪೂರ್ವಕವಾಗಿ ಆರೋಪಿತನಿಗೆ ಒಟ್ಟು ₹14 ಲಕ್ಷ ಹಣ ನೀಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 38/2026 ರಂತೆ BNS ಕಲಂ 351(2), 352, 308(2) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ನಡೆಸುತ್ತಿದ್ದಾರೆ.