ಡೈಲಿವಾರ್ತೆ:15/ಮಾರ್ಚ್/2026

ಭಟ್ಕಳ: ಅಕ್ರಮ ಜಾನುವಾರು ಸಾಗಾಟ – ಇಬ್ಬರು ಆರೋಪಿಗಳ ಬಂಧನ, ಕೋಣಗಳ ರಕ್ಷಣೆ

​ಭಟ್ಕಳ: ವಧೆ ಮಾಡುವ ಉದ್ದೇಶದಿಂದ ಕೇರಳದಿಂದ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಭಟ್ಕಳ ಗ್ರಾಮೀಣ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ.

ಬಂಧಿತರನ್ನು ಬಂದರು ರಸ್ತೆಯ ನಿವಾಸಿ ಸರ್ವೋಷ್ ಹುಸೇನ್ (37) ಮತ್ತು ಬೆಂಗಳೂರು ಮೂಲದ ಶಣ್ಮುಖ ಕೆ.ಎಸ್. ಎಂದು ಗುರುತಿಸಲಾಗಿದೆ.

ಕೇರಳದ ಮಲಪುರಂನಿಂದ ಯಾವುದೇ ಅಧಿಕೃತ ಪರವಾನಗಿ ಇಲ್ಲದೆ ಎರಡು ಕೋಣಗಳನ್ನು ಭಟ್ಕಳಕ್ಕೆ ತಂದು ಕಟ್ಟಿ ಹಾಕಲಾಗಿತ್ತು. ಇವುಗಳನ್ನು ವಧೆ ಮಾಡುವ ಉದ್ದೇಶದಿಂದಲೇ ಇಲ್ಲಿಗೆ ತರಲಾಗಿತ್ತು ಎನ್ನಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ ಪಡೆದ ಭಟ್ಕಳ ಗ್ರಾಮೀಣ ಪೊಲೀಸ್ ನಿರೀಕ್ಷಕ ವೆಂಕಟೇಶ ಮುರನಾಳ ನೇತೃತ್ವದ ತಂಡವು ತಕ್ಷಣ ದಾಳಿ ನಡೆಸಿ ಜಾನುವಾರುಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದೆ.

ಪೊಲೀಸರು ರಕ್ಷಿಸಿದ ಜಾನುವಾರುಗಳ ಒಟ್ಟು ಮೌಲ್ಯ ಸುಮಾರು 6 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ. ಸದ್ಯ ಜಾನುವಾರುಗಳನ್ನು ಸುರಕ್ಷಿತವಾಗಿ ಪೊಲೀಸರ ವಶಕ್ಕೆ ಪಡೆಯಲಾಗಿದೆ.

ಈ ಕಾರ್ಯಾಚರಣೆಯ ಕುರಿತು ಭಟ್ಕಳ ಗ್ರಾಮೀಣ ಠಾಣೆಯ ಪಿಎಸ್‌ಐ ಮಲ್ಲಿಕಾರ್ಜುನ ಕೊರಾಣಿ ಅವರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಕ್ರಮ ಸಾಗಾಟದ ಹಿಂದೆ ಬೇರೆ ಯಾರಾದರೂ ಭಾಗಿಯಾಗಿದ್ದಾರೆಯೇ ಎಂಬ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.