ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಪ್ರತಿಭಟಿಸಿದ ಪವನ್‌ ಕಲ್ಯಾಣ್‌ ಪೊಲೀಸ್‌ ವಶಕ್ಕೆ

ತೆಲುಗು ದೇಶಂ ಪಕ್ಷದ ನಾಯಕ ಚಂದ್ರಬಾಬು ನಾಯ್ಡು ಅವರು ಬಂಧಿಸಿರುವುದು ಆಂಧ್ರ ರಾಜಕಾರಣದಲ್ಲಿ ಸಂಚಲನ ಮೂಡಿಸಿದೆ. ನೂರಾರು ಕೋಟಿ ಭ್ರಷ್ಟಾಚಾರ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಚಂದ್ರಬಾಬುರನ್ನ ಬಂಧಿಸಿರೋದನ್ನ ಖಂಡಿಸಿ, ಅವರಿಗೆ ಬೆಂಬಲ ಸೂಚಿಸಲು ತೆರಳುತ್ತಿದ್ದ ಪವನ್ ಕಲ್ಯಾಣ್- ಜನಸೇನಾ ಪಕ್ಷದ ಹಿರಿಯ ನಾಯಕ ನಾದೆಂಡ್ಲ ಮನೋಹರ್ ಅವರನ್ನು ಎನ್‌ಟಿಆರ್ ಜಿಲ್ಲೆಯಲ್ಲಿ ಆಂಧ್ರ ಪೊಲೀಸರು (ಸೆ.10) ಬಂಧಿಸಿದ್ದಾರೆ.

ಜನಸೇನಾ ಪಕ್ಷದ ನಾಯಕ ಪವನ್ ಕಲ್ಯಾಣ್ ಅವರನ್ನು ವಿಜಯವಾಡಕ್ಕೆ ಸ್ಥಳಾಂತರಿಸಿದ್ದಾರೆ. ಪವನ್‌ರನ್ನು ಬಂಧಿಸಿರೋದರ ಬಗ್ಗೆ ಭಾನುವಾರ (ಸೆ.10) ಆಂಧ್ರ ಪೊಲೀಸರು ತಿಳಿಸಿದ್ದು, ಅವರ ವಿರುದ್ಧ ಯಾವುದೇ ಪ್ರಕರಣ ದಾಖಲಾಗಿಲ್ಲ.

ಟಿಡಿಪಿ ಮುಖ್ಯಸ್ಥ ಚಂದ್ರಬಾಬು ನಾಯ್ಡು ಅವರನ್ನು ಬಂಧಿಸಿದ ಕ್ರಮವನ್ನು ಖಂಡಿಸಿದ್ದರು. ಮಾಜಿ ಸಿಎಂ ಬೆಂಬಲಿಸಲು ವಿಜಯವಾಡಕ್ಕೆ ತೆರಳಲು ಪವನ್ ಯತ್ನಿಸಿದ್ದರು. ಈ ವೇಳೆ ಪವನ್- ಪೊಲೀಸರ ನಡುವೆ ವಾಗ್ವಾದ ನಡೆದಿತ್ತು. ಇನ್ನೂ ವಿಶೇಷ ವಿಮಾನದ ಮೂಲಕ ಹೈದರಾಬಾದ್‌ನಿಂದ ತೆರಳಲು ಮುಂದಾಗಿದ್ದ ಪವನ್‌ರನ್ನು ಪೊಲೀಸರು ತಡೆದಿದ್ದರು.
ಅಲ್ಲಿಗೆ ಸುಮ್ಮನಾಗದೇ ಬಳಿಕ ರಸ್ತೆ ಮಾರ್ಗದ ಮೂಲಕ ಪವನ್ ವಿಜಯವಾಡದತ್ತ ಪ್ರಯಾಣಿಸಿದ್ದಾರೆ. ಶನಿವಾರದಂದು 2 ಬಾರಿ ಎನ್‌ಟಿಆರ್ ಜಿಲ್ಲೆಯಲ್ಲಿ ಅವರ ವಾಹನವನ್ನು ತಡೆಹಿಡಿಯಲಾಯಿತು. ಬಳಿಕ, ಇಂದು (ಸೆ.10) ವಿಜಯವಾಡದ ಮಂಗಳಗಿರಿ ಕಡೆಗೆ ನಡೆದುಕೊಂಡೇ ತೆರಳಲು ಪವನ್ ಕಲ್ಯಾಣ್ ಮುಂದಾಗಿದ್ದಾರೆ. ಈ ವೇಳೆ ಪೊಲೀಸರು ತಡೆದ ಹಿನ್ನೆಲೆಯಲ್ಲಿ ಪವನ್ ಕಲ್ಯಾಣ್ ಅವರು ಅನುಮಂಚಿಪಲ್ಲಿಯಲ್ಲಿ ರಸ್ತೆಯ ಮೇಲೆ ಮಲಗಿ ಪ್ರತಿಭಟನೆ ನಡೆಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದ ಕಾರಣ ಮುಂಜಾಗ್ರತಾ ಕ್ರಮವಾಗಿ ಪವನ್‌ರನ್ನು ಕಸ್ಟಡಿಗೆ ತೆಗೆದುಕೊಳ್ಳಲಾಗಿದೆ. ಬಂಧನದ ಬಗ್ಗೆ ಅಧಿಕೃತವಾಗಿ ನಂದಿಗಾಮ ಉಪವಿಭಾಗದ ಪೊಲೀಸ್ ಅಧಿಕಾರಿ ಜನಾರ್ಧನ್ ನಾಯ್ಡು ತಿಳಿಸಿದ್ದಾರೆ.