ಡೈಲಿ ವಾರ್ತೆ:10 ಸೆಪ್ಟೆಂಬರ್ 2023

ನಾಳೆ ಬೆಂಗಳೂರು ಬಂದ್: 500 ಹೆಚ್ಚುವರಿ ಬಸ್ ರಸ್ತೆಗಿಳಿಸಲು ಬಿಎಂಟಿಸಿ ನಿರ್ಧಾರ

ಬೆಂಗಳೂರು: ಖಾಸಗಿ ವಾಹನ ಚಾಲಕರ ಒಕ್ಕೂಟ ಸೆ.11 ರಂದು ಬೆಂಗಳೂರು ಬಂದ್‌ಗೆ ಕರೆ ನೀಡಿರುವ ಹಿನ್ನೆಲೆಯಲ್ಲಿ, ಪ್ರಯಾಣಿಕರಿಗೆ ಸಂಚಾರಕ್ಕೆ ಸಮಸ್ಯೆ ಆಗಬಾರದು ಎಂಬ ದೃಷ್ಟಿಯಿಂದ 500 ಹೆಚ್ಚುವರಿ ಬಿಎಂಟಿಸಿ ಬಸ್‌ಗಳನ್ನು ಬಿಡಲು ಸಿದ್ಧತೆ ನಡೆದಿದೆ.

ಸೋಮವಾರ ಮುಂಜಾನೆ 5 ಗಂಟೆಯಿಂದ ರಾತ್ರಿ 10 ಗಂಟೆವರೆಗೂ ಹೆಚ್ಚುವರಿ ಬಸ್‌ಗಳು ನಗರದಲ್ಲಿ ಸಂಚರಿಸಲಿವೆ. ಮುಖ್ಯವಾಗಿ ಏರ್ಪೋರ್ಟ್, ಸರ್ಜಾಪುರ, ಅತ್ತಿಬೆಲೆ, ಮೈಸೂರು ರಸ್ತೆ, ಎಲೆಕ್ಟ್ರಾನಿಕ್ ಸಿಟಿ, ಯಲಹಂಕ, ವೈಟ್ ಫೀಲ್ಡ್ ಹಾಗೂ ಔಟರ್ ರಿಂಗ್ ರಸ್ತೆ ಭಾಗದಲ್ಲಿ ಹೆಚ್ಚುವರಿ ಬಸ್ ಸೇವೆ ಒದಗಿಸಲು ನಿರ್ಧರಿಸಲಾಗಿದೆ. ಅಲ್ಲದೇ ಪ್ರಯಾಣಿಕರ ದಟ್ಟಣೆ ಅನುಸಾರ ಬಸ್ ಹೆಚ್ಚಳ ಮಾಡಲು ತೀರ್ಮಾನ ಕೈಗೊಳ್ಳಲಾಗಿದೆ ಎಂದು ಬಿಎಂಟಿಸಿ ಪ್ರಕಟಣೆಯಲ್ಲಿ ತಿಳಿಸಿದೆ.

ಕೆಂಪೇಗೌಡ ಬಸ್ ನಿಲ್ದಾಣ, ಕೆ. ಆರ್ ಮಾರುಕಟ್ಟೆ ಹಾಗೂ ಶಿವಾಜಿನಗರ ಬಸ್ ನಿಲ್ದಾಣಗಳಿಂದ ಕಾಡುಗೋಡಿ, ಸರ್ಜಾಪುರ, ಅತ್ತಿಬೆಲೆ, ಆನೇಕಲ್, ಬನ್ನೇರುಘಟ್ಟ, ಜಿಗಣಿ, ಹಾರೋಹಳ್ಳಿ, ಬಿಡದಿ, ತಾವರೆಕೆರೆ, ನೆಲಮಂಗಲ, ಹೆಸರಘಟ್ಟ, ದೊಡ್ಡಬಳ್ಳಾಪುರ, ದೇವನಹಳ್ಳಿ, ಬಾಗಲೂರು, ಚನ್ನಸಂದ್ರ, ಹೊಸಕೋಟೆಗೆ ಹಾಗೂ ಹೊರ ವರ್ತುಲ – ಒಳ ವರ್ತುಲ ರಸ್ತೆಗಳಲ್ಲಿ ಮತ್ತು ನಗರದ ಪ್ರಮುಖ ಸ್ಥಳಗಳನ್ನು ಸಂಪರ್ಕಿಸುವ ಮಾರ್ಗಗಳಲ್ಲಿ ಹೆಚ್ಚುವರಿಯಾಗಿ 4,000 ಟ್ರಿಪ್ ಸಂಚರಿಸಲಿವೆ.

ಪ್ರಯಾಣಿಕರಿಗೆ ತೊಂದರೆಯಾಗದಂತೆ ನಗರದ ಪ್ರಮುಖ ರಸ್ತೆ, ಬಸ್ ನಿಲ್ದಾಣ ಹಾಗೂ ಜಂಕ್ಷನ್‌ಗಳಲ್ಲಿ ಸಂಸ್ಥೆಯ ಸಿಬ್ಬಂದಿಯನ್ನು ಹಾಗೂ ಸಾರಥಿ ಗಸ್ತು ಪಡೆಗಳಿಂದ ಬಸ್ ಸಂಚಾರದ ಮೇಲ್ವಿಚಾರಣೆ ಮಾಡಲಾಗುತ್ತದೆ. ಈ ವೇಳೆ ಪ್ರಯಾಣಿಕರ ಅಧಿಕ ದಟ್ಟಣೆ ಕಂಡುಬಂದ ಮಾರ್ಗಗಳಲ್ಲಿ ಹೆಚ್ಚುವರಿ ಬಸ್‌ಗಳನ್ನು ನಿಯೋಜಿಸಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

ಭಾನುವಾರ ರಾತ್ರಿ 12 ಗಂಟೆಯಿಂದಲೇ ಖಾಸಗಿ ವಾಹನ ಸಂಚಾರ ಬಂದ್ ಆಗಲಿದ್ದು, ಸೋಮವಾರ ರಾತ್ರಿ 12 ಗಂಟೆವರೆಗೆ ಬಂದ್ ಮಾಡಲು ಖಾಸಗಿ ವಾಹನ ಚಾಲಕರ ಒಕ್ಕೂಟ ನಿರ್ಧಾರ ಮಾಡಿದೆ. ಬಂದ್ ಬಗ್ಗೆ ಜನರಿಗೆ ತಿಳಿಸಲು ಮತ್ತು ಬಂದ್‌ಗೆ ಬೆಂಬಲ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಕೂಡ ಮಾಡಿದೆ.

ಬಂದ್‌ನಿಂದಾಗಿ 32 ಸಂಘಟನೆಗಳ 7 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರ ನಿಲ್ಲಿಸಲಿವೆ. ಏರ್ಪೋಟ್ ಟ್ಯಾಕ್ಸಿ ಸಂಪೂರ್ಣ ಸ್ಥಗಿತಗೊಳಿಸಲಾಗುತ್ತದೆ. ಓಲಾ, ಊಬರ್, ಆಟೋ ಟ್ಯಾಕ್ಸಿ ಬಂದ್ ಆಗಲಿದೆ. ಕಾರ್ಪೊರೇಟ್ ಕಂಪನಿಗಳ ಜೊತೆ ಒಪ್ಪಂದ ಮಾಡಿಕೊಂಡಿರುವ ಬಸ್‌ಗಳು ಕೂಡ ಬಂದ್‌ಗೆ ಬೆಂಬಲ ನೀಡಿದ್ದು ಸಂಚಾರ ಸ್ಥಗಿತಗೊಳಿಸಲಿವೆ.
ಖಾಸಗಿ ವಾಹನಗಳ ಮೂಲಕ ಮಕ್ಕಳನ್ನು ಶಾಲೆಗೆ ಕಳುಹಿಸುವವರಿಗೂ ಬಂದ್ ಬಿಸಿ ತಟ್ಟಲಿದೆ. ಗೂಡ್ಸ್ ವಾಹನಗಳು ಬಂದ್ ಆಗುವ ಸಾಧ್ಯತೆ ಇದೆ. ನಗರದಲ್ಲಿ 3 ಲಕ್ಷ ಆಟೋ, 1.5 ಲಕ್ಷ ಟ್ಯಾಕ್ಸಿ, 20 ಸಾವಿರ ಗೂಡ್ಸ್ ವಾಹನಗಳು, 5 ಸಾವಿರಕ್ಕೂ ಹೆಚ್ಚು ಖಾಸಗಿ ಶಾಲಾ ವಾಹನಗಳು, 80 ಸಾವಿರ ಸಿಟಿ ಟ್ಯಾಕ್ಸಿ ಮತ್ತು ಕಾರ್ಪೊರೇಟ್ ಕಂಪನಿಯ ಬಸ್‌ಗಳು ಸೇವೆಯಿಂದ ಹೊರಗುಳಿಯಲಿವೆ. ಒಟ್ಟು 5 ಲಕ್ಷಕ್ಕೂ ಹೆಚ್ಚು ವಾಹನಗಳು ಸಂಚಾರವನ್ನು ನಿಲ್ಲಿಸಲಿವೆ. ಅಲ್ಲದೇ ಹೋಟೆಲ್ ಮಾಲೀಕರ ಸಂಘದ ಬಳಿಯೂ ಬಂದ್‌ಗೆ ಬೆಂಬಲ ಸೂಚಿಸುವಂತೆ ಮನವಿ ಮಾಡಲಾಗಿದ್ದು ಹೋಟೆಲ್‌ಗಳು ಬಂದ್ ಆಗುವ ಸಾಧ್ಯತೆ ಇದೆ. ಇದರೊಂದಿಗೆ ವರ್ತಕರ ಸಂಘಟನೆಗಳು, ಕನ್ನಡಪರ ಸಂಘಟನೆಗಳು, ಬೀದಿ ಬದಿ ವ್ಯಾಪಾರಿಗಳೊಂದಿಗೆ ಬಂದ್‌ಗೆ ಬೆಂಬಲಿಸುವಂತೆ ಕೇಳಿಕೊಳ್ಳಲಾಗಿದೆ.
ಪ್ರತಿಭಟನಾಕಾರರು ನಗರದೊಳಗೆ ಬೃಹತ್ ಮೆರವಣಿಗೆಗೆ ತಯಾರಿ ಮಾಡಿಕೊಂಡಿದ್ದು, ಮೆರವಣಿಗೆ ಬಳಿಕ ಫ್ರೀಡಂ ಪಾರ್ಕ್ನಲ್ಲಿ ಶಕ್ತಿ ಪ್ರದರ್ಶನಕ್ಕೆ ತಯಾರಾಗಿದ್ದಾರೆ. ಈ ನಿಟ್ಟಿನಲ್ಲಿ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬಿಎಂಟಿಸಿ ಹೆಚ್ಚುವರಿ ಬಸ್‌ಗಳ ಸಂಚಾರಕ್ಕೆ ವ್ಯವಸ್ಥೆ ಮಾಡಲು ಮುಂದಾಗಿದೆ.