ಡೈಲಿ ವಾರ್ತೆ:15 ಸೆಪ್ಟೆಂಬರ್ 2023
ಯಾದಗಿರಿಯಲ್ಲಿ ಅರಣ್ಯಾಧಿಕಾರಿಗಳ ಮಿಂಚಿನ ಕಾರ್ಯಾಚರಣೆ:150 ಕೆ.ಜಿ ಶ್ರೀಗಂಧ ವಶ, ಅರೋಪಿಯ ಬಂಧನ
ಯಾದಗಿರಿ: ಅಕ್ರಮವಾಗಿ ಕಾರಿನಲ್ಲಿ ಸಾಗಿಸುತ್ತಿದ್ದ 15 ಲಕ್ಷ ರೂ. ಮೌಲ್ಯದ 150 ಕೆ.ಜಿ ಶ್ರೀಗಂಧದ ತುಂಡುಗಳನ್ನು ಅರಣ್ಯಾಧಿಕಾರಿಗಳು ದಾಳಿ ನಡೆಸಿ ವಶಪಡಿಸಿಕೊಂಡ ಘಟನೆ ಬಗ್ಗಲಮಡು-ಹಂದಿರಕಿ ರಸ್ತೆಯಲ್ಲಿ ನಡೆದಿದೆ. ಈ ವೇಳೆ ಓರ್ವ ಆರೋಪಿಯನ್ನು ಬಂಧಿಸಲಾಗಿದ್ದು, ಮತ್ತೋರ್ವ ಪರಾರಿಯಾಗಿದ್ದಾನೆ.
ಶ್ರೀಗಂಧ ಸಾಗಿಸುತ್ತಿದ್ದ ಖಚಿತ ಮಾಹಿತಿ ಮೇರೆಗೆ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ. ಈ ವೇಳೆ ಕಾರಿನಲ್ಲಿದ್ದ ಮಹಾರಾಷ್ಟ್ರದ ಸತಾರ ಜಿಲ್ಲೆಯ ಆರೋಪಿ ಸಚಿನ್ ಎಂಬಾತ ಸಿಕ್ಕಿಬಿದ್ದಿದ್ದಾನೆ. ಮತ್ತೋರ್ವ ಆರೋಪಿ ಪಾಂಡುರಂಗ ಎಂಬಾತ ಪರಾರಿಯಾಗಿದ್ದಾನೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಗ್ಗೆ ಪ್ರಾದೇಶಿಕ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕಾಜೋಲ್ ಪಾಟೀಲ್ ಪ್ರತಿಕ್ರಿಯಿಸಿ, ಬಂಧಿತನಿಂದ 1.5 ಕ್ವಿಂಟಾಲ್ ಶ್ರೀಗಂಧ, ಒಂದು ಕಾರು, ಒಂದು ಬೈಕ್ ಹಾಗೂ ಎರಡು ಕೊಡಲಿ ಜಪ್ತಿ ಮಾಡಲಾಗಿದೆ ಎಂದಿದ್ದಾರೆ. ಈ ಸಂಬಂಧ ಅರಣ್ಯ ರಕ್ಷಣಾ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಾಗಿದೆ.