ಡೈಲಿ ವಾರ್ತೆ:15 ಸೆಪ್ಟೆಂಬರ್ 2023

ಭಯೋತ್ಪಾದಕರ ಗುಂಡೇಟಿನಿಂದ ಯೋಧ ಹುತಾತ್ಮ; ಸೆಲ್ಯೂಟ್‌ ಮಾಡಿ ತಂದೆಗೆ ಅಂತಿಮ ನಮನ ಸಲ್ಲಿಸಿದ ಪುಟ್ಟ ಮಕ್ಕಳು

ನವದಹೆಲಿ: ಭಯೋತ್ಪಾದಕ ರೊಂದಿಗಿನ ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಪಾರ್ಥಿವ ಶರೀರಕ್ಕೆ ಅವರ 6 ವರ್ಷದ ಪುತ್ರ ಸೆಲ್ಯೂಟ್‌ ಮಾಡಿದ ಮನಕಲಕುವ ದೃಶ್ಯ ವೈರಲ್‌ ಆಗಿದೆ.

ಕಾಶ್ಮೀರದ ಅನಂತ್‌ನಾಗ್‌ನಲ್ಲಿ ಭಯೋತ್ಪಾದಕರೊಂದಿಗಿನ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಹಾಗೂ ಒಬ್ಬ ಪೊಲೀಸ್‌ ಅಧಿಕಾರಿ ಹುತಾತ್ಮರಾದರು. ಅವರಲ್ಲಿ ಕರ್ನಲ್ ಮನ್‌ಪ್ರೀತ್ ಸಿಂಗ್ ಒಬ್ಬರು. ಪಂಜಾಬ್‌ನ ಮೊಹಾಲಿ ಜಿಲ್ಲೆಯ ಮುಲ್ಲನ್‌ಪುರದಲ್ಲಿ ಕರ್ನಲ್‌ ಮನ್‌ಪ್ರೀತ್‌ ಸಿಂಗ್‌ ಅವರ ಅಂತ್ಯಸಂಸ್ಕಾರಕ್ಕೆ ವ್ಯವಸ್ಥೆ ಮಾಡಲಾಗಿತ್ತು.

ಮನ್‌ಪ್ರೀತ್‌ ಸಿಂಗ್‌ ಅವರ ಪಾರ್ಥಿವ ಶರೀರವನ್ನು ಮನೆಗೆ ತರುವ ವೇಳೆ ಅವರ 6 ವರ್ಷದ ಪುತ್ರ ಮಿಲಿಟರಿ ಡ್ರೆಸ್‌ನಲ್ಲಿ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದ. ಪುಟ್ಟ ಬಾಲಕನ ಪಕ್ಕದಲ್ಲಿ ಆತನಿಗಿಂತ 2 ವರ್ಷ ಚಿಕ್ಕವಳಾದ ಸಹೋದರಿ ಕೂಡ ನಿಂತಿದ್ದಳು. ಆಕೆಯೂ ಅಣ್ಣನಂತೆ ತಂದೆಯ ಪಾರ್ಥಿವ ಶರೀರಕ್ಕೆ ಸೆಲ್ಯೂಟ್‌ ಮಾಡಿದಳು.

ಇಬ್ಬರಿಗೂ ಕುಟುಂಬಕ್ಕೆ ಸಂಭವಿಸಿದ ದುರಂತದ ಬಗ್ಗೆ ತಿಳಿದಿರಲಿಲ್ಲ. ವೀರ ಯೋಧನಿಗೆ ಅಂತಿಮ ನಮನ ಸಲ್ಲಿಸಲು ಅಪಾರ ಜನಸ್ತೋಮ ನೆರೆದಿದ್ದರಿಂದ ಸ್ಥಳೀಯರು ಈ ಇಬ್ಬರು ಮಕ್ಕಳನ್ನು ಮೇಲಕ್ಕೆತ್ತಿ ತಂದೆಯ ಪಾರ್ಥಿವ ಶರೀರ ದರ್ಶನ ಮಾಡಿಸಿದರು. ಕರ್ನಲ್ ಮನ್‌ಪ್ರೀತ್ ಸಿಂಗ್ ಅವರ ಪತ್ನಿ, ಸಹೋದರಿ, ತಾಯಿ ಮತ್ತು ಇತರ ಕುಟುಂಬ ಸದಸ್ಯರು ತೀವ್ರ ದುಃಖದಿಂದಾಗಿ ಬಳಲಿದ್ದರೆ 19 ರಾಷ್ಟ್ರೀಯ ರೈಫಲ್ಸ್‌ನ (19 ಆರ್‌ಆರ್) ಕಮಾಂಡಿಂಗ್ ಆಫೀಸರ್ ಮತ್ತು ಪ್ರತಿಷ್ಠಿತ ಸೇನಾ ಪದಕ (ಶೌರ್ಯ) ಪುರಸ್ಕೃತ ಕರ್ನಲ್ ಮನ್‌ಪ್ರೀತ್ ಸಿಂಗ್ (41) ಬುಧವಾರ ರಾತ್ರಿ ಗುಂಡಿನ ದಾಳಿಯಿಂದಾಗಿ ಹುತಾತ್ಮರಾಗಿದ್ದರು.

ಬುಧವಾರ ಕಣಿವೆಯ ಕೊಕೊರೆನಾಗ್ ಪ್ರದೇಶದಲ್ಲಿ ಭಯೋತ್ಪಾದಕರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಜಮ್ಮು ಮತ್ತು ಕಾಶ್ಮೀರದ ಪೊಲೀಸ್‌ ಹಾಗೂ ಭಾರತೀಯ ಸೇನೆಯ ಇಬ್ಬರು ಯೋಧರು ಸೇರಿ ಮೂವರು ಅಧಿಕಾರಿಗಳು ಹುತಾತ್ಮರಾಗಿದ್ದರು. ಕರ್ನಲ್ ಮನ್‌ಪ್ರೀತ್‌ ಸಿಂಗ್‌, ಮೇಜರ್ ಆಶಿಶ್ ಧೋಂಚಕ್‌, ಡಿಎಸ್‌ಪಿ ಹುಮಾಯೂನ್ ಭಟ್ ಹುತಾತ್ಮರು.