ಡೈಲಿ ವಾರ್ತೆ: 21/Sep/2023
ಕೋಟ: ಬಟ್ಟೆ ಅಂಗಡಿ ಹೆಸ್ರಲ್ಲಿ ವಂಚನೆ ಆರೋಪ- ಚೈತ್ರಾ ವಿಚಾರಣೆಗೆ ಒಪ್ಪಿಸುವಂತೆ ಕೋಟ ಪೊಲೀಸರ ಮನವಿ
ಕೋಟ: ಉಡುಪಿ ಜಿಲ್ಲೆ ಬ್ರಹ್ಮಾವರ ತಾಲೂಕಿನ ಕೋಟ ಪೊಲೀಸ್ ಠಾಣೆಯಲ್ಲಿ ಚೈತ್ರಾ ಮೇಲೆ ಮತ್ತೊಂದು ವಂಚನೆ ಪ್ರಕರಣ ದಾಖಲಾಗಿದೆ.
ಹಲವು ವರ್ಷಗಳ ಹಿಂದಿನ ಗೆಳೆಯ ಸುದೀನ್ ಕೋಡಿ ತನಗಾದ ಮೋಸಕ್ಕೆ ನ್ಯಾಯ ಕೊಡಿಸಿ ಎಂದು ಠಾಣೆಯ ಮೆಟ್ಟಿಲು ಹತ್ತಿದರು. ಈ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಎಫ್‍ಐಆರ್ ದಾಖಲಿಸಿದ್ದಾರೆ. ಈ ಪ್ರಕರಣದ ವಿಚಾರಣೆಗೆ ಮುಂದಾಗಿರೋ ಉಡುಪಿ ಕೋಟ ಠಾಣೆಯ ಪೊಲೀಸರು ಚೈತ್ರಾಳನ್ನ ವಿಚಾರಣೆ ನಡೆಸಲು ಮುಂದಾಗಿದ್ದಾರೆ. ಅದಕ್ಕಾಗಿ ಬಾಡಿ ವಾರೆಂಟ್ ನೀಡುವಂತೆ ಬೆಂಗಳೂರು 1st ACMM ಕೋರ್ಟ್‍ಗೆ ಉಡುಪಿ ಜಿಲ್ಲಾ ಸತ್ರ ನ್ಯಾಯಾಲಯ ಮೂಲಕ ಮನವಿ ರವಾನೆ ಮಾಡಲಾಗಿದೆ.
2018 ರಿಂದ 2023ರ ವರೆಗೆ ಹಂತ ಹಂತವಾಗಿ 5 ಲಕ್ಷ ರೂಪಾಯಿ ಚೈತ್ರಾ ಕುಂದಾಪುರ, ಸುದೀನ್ ಅವರಿಂದ ಪಡೆದುಕೊಂಡಿದ್ದರು. ಬಟ್ಟೆ ಅಂಗಡಿ ಹಾಕಿ ಕೊಡುವುದಾಗಿ ಮೋಸ ಮಾಡಿದ್ದರು. ಈ ವಂಚನೆ ಪ್ರಕರಣಕ್ಕೆ ಸಂಬಂಧಪಟ್ಟ ಹಾಗೆ ಪೊಲೀಸರು ಚೈತ್ರಾ ವಿಚಾರಣೆ ಮಾಡಬೇಕಾಗಿದೆ. ಸುದೀನ್ ದೂರಿನ ಹಿನ್ನೆಲೆ ನ್ಯಾಯಾಲಯಕ್ಕೆ ಬಾಡಿವಾರೆಂಟ್ ಮೂಲಕ ಚೈತ್ರಾ ವಿಚಾರಣೆಗೆ ಉಡುಪಿ ಪೊಲೀಸರು ಮನವಿ ಮಾಡಿದ್ದಾರೆ.
ಸಿಸಿಬಿ ವಿಚಾರಣೆ ಮುಗಿದ ಬಳಿಕ ಬಾಡಿವಾರೆಂಟ್ ಪಡೆಯುವ ಪ್ರಕ್ರಿಯೆ ಶುರು ಆಗಲಿದೆ. ಅದಕ್ಕೂ ಮುನ್ನ ಬೈಂದೂರು, ಕುಂದಾಪುರ, ಬ್ರಹ್ಮಾವರ, ಉಡುಪಿ ತಾಲೂಕಿನಲ್ಲಿ ಸಹಜ ಪಕ್ರಿಯೆ ನಡೆಯಬೇಕಿದೆ. ಮತ್ತೆರಡು ಪ್ರಕರಣ ಬಿದ್ದರೂ ಆಶ್ಚರ್ಯ ಇಲ್ಲ ಎಂದು ಚೈತ್ರಾ ಕುಂದಾಪುರ ಆಪ್ತರಾಗಿದ್ದವರು ಮಾಹಿತಿ ನೀಡಿದ್ದಾರೆ.