ಡೈಲಿ ವಾರ್ತೆ: 21/Sep/2023

ಸ್ಥಳೀಯ ಸಂಘಟನೆಗಳು ಗಣೇಶೋತ್ಸವವನ್ನು ಆಚರಿಸುವ ಮೂಲಕ ಊರಿನ‌ಲ್ಲಿ ಐಕ್ಯತೆ ಉಂಟಾಗುತ್ತದೆ:ರಮಾನಾಥ ರೈ

ಬಂಟ್ವಾಳ : ಸ್ಥಳೀಯ ಸಂಘಟನೆಗಳು ಗಣೇಶೋತ್ಸವವನ್ನು ಆಚರಿಸುವ ಮೂಲಕ ಊರಿನ‌ಲ್ಲಿ ಐಕ್ಯತೆ ಉಂಟಾಗುತ್ತದೆ. ಅದರೊಂದಿಗೆ ಊರ ಸಾಧಕರನ್ನು, ವಿದ್ಯಾರ್ಥಿಗಳನ್ನು, ಮಹಿಳೆಯರನ್ನು ಗೌರವಿಸಿದ್ದು ಅನುಕರಣೀಯ. ಮಹಿಳೆಯರಿಗೆ ಸಮಾನ ಸ್ಥಾನಮಾನ ನೀಡಿ ಗೌರವಿಸುವುದು ಇನ್ನಷ್ಷು ಹೆಚ್ಚಲಿ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.

ಅವರು ಯುವ ಸಂಗಮ ಸೇವಾ ಟ್ರಸ್ಟ್ ಶೇಡಿಗುರಿ ನರಿಕೊಂಬು ಶಂಭೂರು ಹಾಗು ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ ನಡೆದ 30 ನೇ ವರ್ಷದ ಗಣೇಶೋತ್ಸವ ಸಂದರ್ಭದಲ್ಲಿ ಬೊಂಡಾಲ ಜಗನ್ನಾಥ ಶೆಟ್ಟಿ ವೇದಿಕೆಯಲ್ಲಿ ನಡೆದ ಸಾಧಕರ ಸನ್ಮಾನ ಸಮಾರಂಭದಲ್ಲಿ ಸಾಧಕರನ್ನು ಗೌರವಿಸಿ ಮಾತನಾಡಿದರು.

ನರಿಕೊಂಬು ಗ್ರಾಮ ಪಂಚಾಯತ್ ಅಧ್ಯಕ್ಷ ಸಂತೋಷ್ ಕುಮಾರ್ ಅಡ್ಡದಪಾದೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿ, ಲೆವಿನ್ ಇಲೆಕ್ಟ್ರಿಕಲ್ಸ್ ನ ಪಿಯೂಷ್ ಎಲ್, ರೊಡ್ರಿಗಸ್, ಅಡ್ಯಾರ್ ಭಂಡಾರಿ ಪೌಂಡೇಶನ್ ಟ್ರಸ್ಟಿ ಜಗನ್ನಾಥ ಚೌಟ, ಉದ್ಯಮಿ ಕಿಶೋರ್ ಪೂಜಾರಿ ಕಟ್ಟೆಮಾರ್, ಇಂಜಿನಿಯರ್ ಶೈಲೇಶ್ ಪೂಜಾರಿ ಕುಚ್ಚಿಗುಡ್ಡೆ, ಗಣೇಶೊತ್ಸವ ಸಮಿತಿ ಅಧ್ಯಕ್ಷ ಸುಧೀರ್ ನಿರ್ಮಾಲ್ ಉಪಸ್ಥಿತರಿದ್ದರು.

ಈ ಸಂದರ್ಭ ನರಿಕೊಂಬು ನಾಲ್ಕೈತ್ತಾಯ ಪಂರ್ಜುಲಿ ಸಮಿತಿ ಅಧ್ಯಕ್ಷ ಜಗನ್ನಾಥ ಬಂಗೇರ ನಿರ್ಮಾಲ್ ಹಾಗು ಪದ್ಮಶ್ರೀ ಇಲೆಕ್ಟ್ರಿಕಲ್ಸ್ ಮಾಲಕ ಪದ್ಮನಾಭ ಮಯ್ಯ ಏಲಬೆ ಇವರನ್ನು ಸನ್ಮಾನಿಸಲಾಯಿತು. ಬೊಂಡಾಲ ಜಗನ್ನಾಥ ಶೆಟ್ಡಿ ಸ್ಮಾರಕ ಸರಕಾರಿ ಪ್ರೌಢಶಾಲೆ ಶಂಭೂರು ಇಲ್ಲಿ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಗಳಿಸಿದ ಧನುಷ್, ಸುಭೀಕ್ಷಾ, ಆಂಗ್ಲ ಮಾಧ್ಯಮದಲ್ಲಿ ಅತ್ಯಧಿಕ ಅಂಕ ಗಳಿಸಿದ ಹೃತಿಕ್, ದಿಯಾಶ್ರೀ ಅವರನ್ನು ಅಭಿನಂದಿಸಲಾಯಿತು.

ದುರ್ಗಾಪರಮೇಶ್ವರಿ ಮಹಿಳಾ ಮಂಡಳಿ ವತಿಯಿಂದ ಜಯಶ್ರೀ ರವೀಂದ್ರ ಸಪಲ್ಯ ಹಾಗು ಸೌಮ್ಯ ನಾಯ್ಕ್ ರಿಗೆ ಅಭಿನಂದನೆ ಹಾಗು ಹಿರಿಯ ಮಹಿಳಾ ಸದಸ್ಯರಿಗೆ ಗೌರವಾರ್ಪಣೆ ನಡೆಯಿತು.

ಯುವ ಸಂಗಮ ಅಧ್ಯಕ್ಷ ಬೊಂಡಾಲ ಸಚ್ಚಿದಾನಂದ ಶೆಟ್ಟಿ ಸ್ವಾಗತಿಸಿ, ಅಕ್ಷತಾ ರೆಂಜೆಮಾರ್ ವಂದಿಸಿದರು. ಯಶೋಧರ ಕೊಲ್ಲೂರು ಬಹುಮಾನಿತರ ಪಟ್ಟಿ ವಾಚಿಸಿದರು. ಶಿಕ್ಷಕ ಹರಿಪ್ರಸಾದ್ ಕುಲಾಲ್ ಕಾರ್ಯಕ್ರಮ ನಿರೂಪಿಸಿದರು.