ಡೈಲಿ ವಾರ್ತೆ:21 ಸೆಪ್ಟೆಂಬರ್ 2023

ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ 2022-23 ನೇ ಸಾಲಿನಲ್ಲಿ ಒಟ್ಟು 376.85 ಕೋ.ರೂ.ವ್ಯವಹಾರ ನಡೆಸಿ,1.50 ಕೋ.ರೂ.ನಿವ್ವಳ ಲಾಭ

ಬಂಟ್ವಾಳ : ಸಿದ್ದಕಟ್ಟೆ ಸಹಕಾರಿ ವ್ಯವಸಾಯಿಕ ಸಂಘ ನಿ.ವು 2022-23 ನೇ ಸಾಲಿನಲ್ಲಿ ಒಟ್ಟು
376.85 ಕೋ.ರೂ.ವ್ಯವಹಾರ ನಡೆಸಿ,1.50 ಕೋ.ರೂ.ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು‌ ತಿಳಿಸಿದ್ದಾರೆ.

ಗುರುವಾರ ಸಂಘದ ಕಚೇರಿ‌ ಸಭಾಂಗಣದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ‌ ನೀಡಿದ ಅವರು, ಪ್ರಸಕ್ತ ಸಾಲಿನ ವರ್ಷಾಂತ್ಯಕ್ಕೆ ಸಂಘದಲ್ಲಿ 46.04 ಕೋ.ರೂ. ಠೇವಣಿ ಇದ್ದು,173.35 ಕೋ.ರೂ. ದುಡಿಯುವ ಬಂಡವಾಳ 81.74 ಕೋ.ರೂ.ಸಾಲ ಹೊರ ಬಾಕಿ ಇದ್ದು, 14.12 ಕೋ.ರೂ.ಹೂಡಿಕೆಯನ್ನು ಹೊಂದಿದೆ. ಶೇ.99 ಸಾಲ ವಸೂಲಾತಿಯನ್ನು ಮಾಡಿದೆ ಎಂದರು.

1947 ರಲ್ಲಿ ಆಗಿನ ಸಹಕಾರಿ ಬಂಧುಗಳ ಸಹಕಾರದಲ್ಲಿ ಬಿ. ಕೃಷ್ಣ ರೈ ಅವರ ಅಧ್ಯಕ್ಷತೆಯಲ್ಲಿ ಸ್ಥಾಪನೆಯಾದ ಸಿದ್ಧಕಟ್ಟೆ ಸಂಘವು ಪ್ರಸ್ತುತ ದಿನಗಳಲ್ಲಿ ಎಂಟು ಗ್ರಾಮಗಳ ವ್ಯಾಪ್ತಿಯಲ್ಲಿ ತೃಪ್ತಿಕರ ಸೇವೆಯನ್ನು ನೀಡುತ್ತಿದೆ ಎಂದ ಅವರು 2022-23 ನೇ ಸಾಲಿನಲ್ಲಿ ಉತ್ತಮ ಸಾಧನೆಗಾಗಿ ದ.ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ ವತಿಯಿಂದ ವಿಶೇಷ ಪ್ರೋತ್ಸಾಹಕ ಬಹುಮಾನ ಪಡೆದಿದೆ. ಅಖಿಲ ಭಾರತ ಸಹಕಾರ ಸಪ್ತಾಹ -2022 ಅಂಗವಾಗಿ ದ.ಕ ಜಿಲ್ಲಾ ಸಹಕಾರ ಸಪ್ತಾಹದ ಉದ್ಘಾಟನಾ ಕಾರ್ಯಕ್ರಮವನ್ನು ಸಂಘದ ಅವರಣದಲ್ಲಿ ಯಶಸ್ವಿಯಾಗಿ ನಿರ್ವಹಿಸಿದ ಹೆಗ್ಗಳಿಕೆಗೂ ಪಾತ್ರವಾಗಿದೆ ಎಂದರು.

2022-23 ನೇ ಸಾಲಿನಲ್ಲಿ 1166 ರೈತರ1551 ಎಕ್ರೆಗೆ 40 ಲಕ್ಷಕ್ಕೂ ಹೆಚ್ಚು ಹವಾಮಾನ ಆಧಾರಿತ ಬೆಳೆ ವಿಮೆ ಯೋಜನೆಯಲ್ಲಿ ಪ್ರೀಮಿಯಂ ಪಾವತಿಸಲಾಗಿದೆ. ಅದೇರೀತಿ ಸಂಘದ ಮೂಲಕ 486 ಕುಟುಂಬಗಳು 2,29,680 ರೂ‌. ವಿಮಾ ಮೊತ್ತವನ್ನು ಪಾವತಿಸಿ ಯಶಸ್ವಿನಿ ವಿಮಾ ಯೋಜನೆಗೆ ನೋಂದಣಿಯಾಗಿವೆ.

ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಶೇ. 90 ಮತ್ತು ಅದಕ್ಕಿಂತ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರ ಮಕ್ಕಳನ್ನು ಮಹಾಸಭೆಯಲ್ಲಿ ಪುರಸ್ಕಾರಿಸಲಾಗುತ್ತಿದೆ ಎಂದರು.

ಎಂಎಸ್ ಸಿ ಯೋಜನೆಯಡಿ 58 ಲಕ್ಷ ರೂ. ವೆಚ್ಚದಲ್ಲಿ ನೇತಾಜಿ ಬಹುಪಯೋಗಿ ಸೇವಾ ಕೇಂದ್ರ, ಸಂಘದ ಸ್ಥಾಪಕಾಧ್ಯಕ್ಷರಾದ ಬಿ. ಕೃಷ್ಣ ರೈ ಅವರ ನೆನಪಿಗಾಗಿ “ಬೆಳ್ಳಿಪ್ಪಾಡಿ ಕೃಷ್ಣ ರೈ ಸಭಾಂಗಣ” ವನ್ನು ನಿರ್ಮಿಸಲಾಗಿದೆ. ಸಂಘದ ಅಮೃತಮಹೋತ್ಸವ ಹಾಗೂ ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವ ಪ್ರಯುಕ್ತ ಸ್ವಾತಂತ್ರ್ಯ ಹೋರಾಟಗಾರ “ವೀರ ಸಾರ್ವಕರ್” ವಾಣಿಜ್ಯ ಸಂಕಿರ್ಣ ನಿರ್ಮಿಸಲಾಗಿದೆ ಎಂದರು.

ಸಂಘದ ವಾರ್ಷಿಕ ಮಹಾಸಭೆಯು ಸೆ. 23 ರಂದು ಸಂಘದ ‘ಬೆಳ್ಳಿಪ್ಪಾಡಿ ಕೃಷ್ಣ ರೈ ಸಭಾಂಗಣ’ದಲ್ಲಿ ಜರಗಲಿದ್ದು, ಸಂಘದ ಎಲ್ಲಾ ಸದಸ್ಯರು ಮಹಾಸಭೆಗೆ ಹಾಜರಾಗುವಂತೆ ಈ ಸಂದರ್ಭ ಪ್ರಭಾಕರ ಪ್ರಭು ವಿನಂತಿಸಿದರು. .

ಸುದ್ದಿಗೋಷ್ಟಿಯಲ್ಲಿ ನಿರ್ದೇಶಕರುಗಳಾದ ರಾಜೇಶ್ ಶೆಟ್ಟಿ ಕೊನೆರಬೆಟ್ಟು, ಸಂದೇಶ್ ಶೆಟ್ಟಿ ಪೊಡಂಬು, ದಿನೇಶ್ ಪೂಜಾರಿ ಹುಲಿಮರು, ವೀರಪ್ಪ, ವರವ, ಜಾರಪ್ಪ ನಾಯ್ಕ, ಉಮೇಶ್ ಗೌಡ, ದೇವರಾಜ್ ಸಾಲ್ಯಾನ್, ಹರೀಶ್ ಆಚಾರ್ಯ, ಅರುಣಾ ಎಸ್.ಶೆಟ್ಟಿ, ಮಂದಾರತಿ ಎಸ್. ಶೆಟ್ಟಿ, ಮಾಧವ ಶೆಟ್ಟಿಗಾರ್, ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಆರತಿ ಶೆಟ್ಟಿ ಉಪಸ್ಥಿತರಿದ್ದರು.