ಡೈಲಿ ವಾರ್ತೆ:24 ಸೆಪ್ಟೆಂಬರ್ 2023
ಗಣೇಶ ಮೂರ್ತಿಯ ಮೆರವಣಿಗೆಯ ಸಂದರ್ಭ ಬುರ್ಖಾ ಧರಿಸಿ ಡಾನ್ಸ್ – ಯುವಕನ ಬಂಧನ!
ಚೆನ್ನೈ: ಗಣೇಶ ಚತುರ್ಥಿ ಆಚರಣೆಯ ವೇಳೆ ಯುವಕನೊಬ್ಬ ಬುರ್ಖಾ ಧರಿಸಿ ಡಾನ್ಸ್ ಮಾಡಿರುವ ವಿಡಿಯೋ ವೈರಲ್ ಆದ ಬೆನ್ನಲ್ಲೇ ಆರೋಪಿ ಯುವಕನನ್ನು ತಮಿಳುನಾಡು ಪೊಲೀಸರು ಬಂಧಿಸಿದ್ದಾರೆ.
ಈ ಘಟನೆ ವೆಲ್ಲೂರಿನಲ್ಲಿ ನಡೆದಿದೆ.
ಸೆ. 21 ಗಣೇಶ ಮೂರ್ತಿಯ ಮೆರವಣಿಗೆಯ ಸಂದರ್ಭದಲ್ಲಿ ವ್ಯಕ್ತಿಯೊಬ್ಬ ಬುರ್ಖಾ ಧರಿಸಿ ಮೆರವಣಿಗೆಯ ಬೀದಿಯಲ್ಲಿ ಡಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಕುರಿತು ಕ್ರಮ ಕೈಗೊಳ್ಳುವಂತೆ ಪೊಲೀಸರು ಸಾರ್ವಜನಿಕರಿಂದ ದೂರು ಸ್ವೀಕರಿಸಿದ್ದರು. ದೂರಿನ ಆಧಾರದ ಮೇಲೆ ತನಿಖೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
ಬಂಧಿತನನ್ನು ವಿರುಥಂಪಟ್ಟು ಮೂಲದ ಅರುಣ್ಕುಮಾರ್ ಎಂದು ಗುರುತಿಸಲಾಗಿದೆ. ಎರಡು ಗುಂಪುಗಳ ನಡುವೆ ದ್ವೇಷ ಉಂಟು ಮಾಡುವ ದುರುದ್ದೇಶದಿಂದಲೇ ಆರೋಪಿ ಅರುಣ್ಕುಮಾರ್ ಡಾನ್ಸ್ ಮಾಡಿರುವ ಆರೋಪ ಕೇಳಿಬಂದಿದೆ.
ಯಾರೇ ಆಗಲಿ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರಲು ಯತ್ನಿಸಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ. ಘಟನೆಯಲ್ಲಿ ಭಾಗಿಯಾಗಿರುವ ಇತರರ ಪತ್ತೆಗೆ ಪೊಲೀಸರು ಮುಂದಾಗಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ.