ಡೈಲಿ ವಾರ್ತೆ: 26/Sep/2023
ಬೆಂಗಳೂರು ಬಂದ್ ಹಿನ್ನಲೆ – ಹೋಟೆಲ್ ತೆರೆದಿದ್ದಕ್ಕೆ ಮಾಲೀಕನ ಮೇಲೆ ಹಲ್ಲೆ.!
ಬೆಂಗಳೂರು: ಬಂದ್ ವೇಳೆ ಹೋಟೆಲ್ ತೆರೆದಿದ್ದಕ್ಕೆ ಮಾಲೀಕ ಹಾಗೂ ಸಿಬ್ಬಂದಿ ಮೇಲೆ ಎಂಟಕ್ಕೂ ಹೆಚ್ಚು ಹೋರಾಟಗಾರರು ಹಲ್ಲೆ ನಡೆಸಿರುವ ಪ್ರಕರಣ ಜಯನಗರದಲ್ಲಿ ನಡೆದಿದೆ.
ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ಖಂಡಿಸಿ ನಗರದಲ್ಲಿ ಪ್ರತಿಭಟನೆಯ ಕಾವು ಹೆಚ್ಚಾಗಿದೆ. ಈ ವೇಳೆ ಬಹುತೇಕ ಅಂಗಡಿಗಳು, ಮಾಲ್ ಹಾಗೂ ಹೋಟೆಲ್‍ಗಳು ಮುಚ್ಚಿದ್ದವು. ಆದರೆ ಜಯನಗರದ ಮೂರನೇ ಹಂತದಲ್ಲಿ ಹೋಟೆಲ್‍ನ್ನು ತೆರದಿದ್ದಕ್ಕೆ ಹೋರಾಟಗಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಹೋಟೆಲ್‍ಗೆ ಬೈಕ್‍ನಲ್ಲಿ ಬಂದಿದ್ದ ಹೋರಾಟಗಾರರು ಏಕಾಏಕಿ ಒಳಗೆ ನುಗ್ಗಿದ್ದಾರೆ. ಬಳಿಕ ಚೇರ್ ಹಾಗೂ ಗ್ಲಾಸ್‍ಗಳನ್ನು ಒಡೆದು ಹಾಕಿದ್ದಾರೆ.
ಈ ವೇಳೆ ಹೋಟೆಲ್‍ನಲ್ಲಿದ್ದ ಸಿಬ್ಬಂದಿ ಹೋರಾಟಗಾರರ ಕೃತ್ಯವನ್ನು ಮೊಬೈಲ್‍ನಲ್ಲಿ ವೀಡಿಯೋ ಮಾಡಿದ್ದಾರೆ. ಇದರಿಂದ ಕೆರಳಿದ ಗುಂಪು ವೀಡಿಯೋ ಮಾಡುತ್ತಿದ್ದ ವ್ಯಕ್ತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಬಳಿಕ ಅಲ್ಲಿಂದ ಪರಾರಿಯಾಗಿದ್ದಾರೆ. ಇದಾದ ಬಳಿಕ ಸಿಬ್ಬಂದಿ ಹೋಟೆಲ್‍ನ್ನು ಮುಚ್ಚಿದ್ದಾರೆ.
ಈ ಸಂಬಂಧ ಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.