ಡೈಲಿ ವಾರ್ತೆ:26 ಸೆಪ್ಟೆಂಬರ್ 2023
ಗಣಿತ ಶಿಕ್ಷಕರಿಗೆ ಕಾರ್ಯಗಾರ: ಗಣಿತದಲ್ಲಿ ಆಸಕ್ತಿ ಮೂಡಿಸಿದರೆ ಅದರಷ್ಟು ಸರಳ ವಿಷಯ ಬೇರೊಂದಿಲ್ಲ–ನಿವೃತ್ತ ಪ್ರಾ. ಬಿ. ಎಂ. ಬೆಳಗಲಿ
ವಿವಿಧ ಪದ್ಧತಿಗಳ ಮೂಲಕ ಗಣಿತ ವಿಷಯದಲ್ಲಿ ಆಸಕ್ತಿ ಮೂಡುವಂತೆ ಮಾಡಿದ್ದೆ ಆದರೆ ಅದರಷ್ಟು ಸರಳ ಮತ್ತು ನಿಖರ ವಿಷಯ ಬೇರೊಂದಿಲ್ಲ. ಆ ನಿಟ್ಟಿನಲ್ಲಿ ವಿವಿಧ ಸಂಪನ್ಮೂಲಗಳನ್ನು ಓದಿ ತಿಳಿದು ಪಾಂಡಿತ್ಯ ಗಳಿಸಿದ ನಂತರ ತಿಳಿಯುವಂತೆ ಹೇಳುವುದು ಒಳ್ಳೆಯದು ಎಂದು ವಿಷಯ ತಜ್ಞರು ಮತ್ತು ಆರ್. ಎಲ್ ಎಸ್. ಕಾಲೇಜಿನ ನಿವೃತ್ತ ಪ್ರಾಧ್ಯಾಪಕರು ಆದ ಬಿ. ಎಂ. ಬೆಳಗಲಿ ಯವರು ಸೋಮವಾರ ದಿ.25 ರಂದು ಬೆಳಗಾವಿ ಗ್ರಾಮೀಣ ಶೈಕ್ಷಣಿಕ ವಲಯದ ಗಣಿತ ಶಿಕ್ಷಕರಿಗೆ ಏರ್ಪಡಿಸಲಾದ ಒಂದು ದಿನದ ಗಣಿತ ಕಾರ್ಯಗಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದರು.
ಬದಲಾದ ಪರೀಕ್ಷಾ ಪದ್ಧತಿ ಮತ್ತು ಪಿಯುಸಿ ಹಂತದಲ್ಲಿ ವಿದ್ಯಾರ್ಥಿಗಳಿಗೆ ಆಗುವ ಗೊಂದಲ ತಡೆಯಲು 10 ನೇ ತರಗತಿ ಹಂತದಲ್ಲಿ ಕ್ಲಿಷ್ಟ ವಿಷಯಗಳಾದ ತ್ರಿಕೋನಮಿತಿ, ಶ್ರೇಢಿಗಳು,ಕೋ – ಆರ್ಡಿನೇಟ್ ಜಾಮೆಟ್ರಿ ಅಧ್ಯಾಯಗಳ ಕುರಿತಾದ ಮೂಲಭೂತ ಅಂಶಗಳನ್ನು ಮನದಟ್ಟು ಮಾಡಬೇಕು. ಸಿಬಿಎಸ್ಈ ಮತ್ತು ರಾಜ್ಯ ಪಠ್ಯಕ್ರಮದಳ ವಿಷಯ ವಸ್ತು ಒಂದೇ ಆಗಿದ್ದರೂ ಪ್ರಶ್ನೆ ಮಾದರಿ ಬೇರೆ ಆಗಿರುತ್ತದೆ. ಆ ನಿಟ್ಟಿನಲ್ಲಿ ಸಮಯವನ್ನು ಉಳಿಸುವ ತಂತ್ರಗಳ ಆಧಾರದ ಮೇಲೆ ಉತ್ತರಗಳನ್ನು ಕಂಡುಹಿಡಿಯುವ ತಂತ್ರ ಕಳಿಸಿದ್ದೇ ಆದರೆ ಮುಂದಿನ ಅವರ ಸಿಇಟಿ ಮತ್ತು ಇತರೆ ಸ್ಪರ್ಧಾ ಪರೀಕ್ಷೆಗಳಲ್ಲಿ ಅನುಕೂಲವಾಗುತ್ತದೆ ಎಂದು ತ್ರಿಕೋನಮಿತಿ ವಿಷಯವಸ್ತುವನ್ನು ಬಿಚ್ಚಿಟ್ಟರು. ಕಾರ್ಯಗಾರದಲ್ಲಿ ಬಿ. ಎಂ. ಬೆಳಗಲಿ ಯವರು 10 ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಬರೆದಿರುವ’ ಸಿಂಪ್ಲಿಫೈಡ್ ಮ್ಯಾಥೆಮ್ಯಾಟಿಕ್ಸ್’ ಪುಸ್ತಕವನ್ನು ಪರಿಚಯಿಸಿ ಲಾಭ ವಿದ್ಯಾರ್ಥಿಗಳು ಪಡೆಯುವಂತೆ ಗ್ರಾಮೀಣ ವಲಯದ ಶಾಲೆಗಳ ಶಿಕ್ಷಕರಿಗೆ ಒಂದೊಂದು ಪುಸ್ತಕ ನೀಡಿದರು. ಕಾರ್ಯಗಾರದಲ್ಲಿ ರಾಜು ಪೂಜಾರಿ, ಗಜಾನನ ಸೇಟ್, ಮಾಲಾ ಬುಳ್ಳಾ, ಎಸ್. ಎನ್. ಕೇರಿಮಠ, ಆರ್. ಎಂ. ಕೋಕಿತಕರ, ಅನಿಲ ಹುಂದ್ರೆ, ವಿ. ಎಸ್. ಬೀಳಗಿ ಸೇರಿದಂತೆ ಗ್ರಾಮೀಣ ವಲಯದ ಎಲ್ಲಾ ಸರ್ಕಾರಿ ಅನುದಾನಿತ ಮತ್ತು ಖಾಸಗಿ ಶಾಲೆಗಳ ಗಣಿತ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಚೇತನಾ ಹೆಗಡೆ ಸ್ವಾಗತಿಸಿದರು. ಶಿವಾನಂದ ತಲ್ಲೂರ ಕಾರ್ಯಾಗಾರದ ಕುರಿತಾದ ಅಭಿಪ್ರಾಯ ವ್ಯಕ್ತಪಡಿಸಿದರು. ರೂಪಾ ಮಗದುಮ್ ನಿರೂಪಿಸಿದರು. ಕೊನೆಯಲ್ಲಿ ಎಂ. ಎಸ್. ಸವದತ್ತಿ ವಂದಿಸಿದರು.