ಡೈಲಿ ವಾರ್ತೆ: 01/OCT/2023

ಅ. 3ರಂದು ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಒಕ್ಕೂಟದಿಂದ ಉಡುಪಿ ಜಿಲ್ಲೆ ಬಂದ್ ರದ್ದು!

ಉಡುಪಿ: ಪರವಾನಿಗೆ ರಹಿತ ಕಟ್ಟಡ ಸಾಮಗ್ರಿ ಸಾಗಾಟ ವಾಹನಗಳನ್ನು ಮುಟ್ಟುಗೋಲು ಹಾಕಿ ದಂಡ ವಿಧಿಸಿ ಪ್ರಕರಣ ದಾಖಲಿಸುತ್ತಿರುವುದನ್ನು ವಿರೋಧಿಸಿ ಉಡುಪಿ ಜಿಲ್ಲಾ ಕಟ್ಟಡ ಸಾಮಗ್ರಿ ಸಾಗಾಟ ಲಾರಿ, ಟೆಂಪೋ ಮಾಲಕರ ಒಕ್ಕೂಟದ ನೇತೃತ್ವದಲ್ಲಿ ಉಡುಪಿ ಜಿಲ್ಲೆಯಾದ್ಯಂತ ಹಮ್ಮಿಕೊಂಡಿರುವ ಅನಿರ್ಧಿಷ್ಠಾವಧಿ ಮುಷ್ಕರವು ಶನಿವಾರವೂ ಮುಂದುವರೆದಿದೆ.

ಕಟ್ಟಡ ಸಾಮಗ್ರಿ ಸಾಗಾಟವನ್ನು ಸ್ಥಗಿತಗೊಳಿಸಿ ನೂರಾರು ಸಂಖ್ಯೆಯ ಲಾರಿ ಹಾಗೂ ಟೆಂಪೋವನ್ನು ರಾಷ್ಟ್ರೀಯ ಹೆದ್ದಾರಿಯ ಹೆಮ್ಮಾಡಿ, ಕುಂದಾಪುರ, ಕೋಟ, ಕೋಟೇಶ್ವರ, ಉದ್ಯಾವರ ಬಲಾಯಿಪಾದೆ,ಕಾರ್ಕಳದ ರಸ್ತೆ ಬದಿಯಲ್ಲೂ ಸರತಿ ಸಾಲಿನಲ್ಲಿ ನಿಲ್ಲಿಸಲಾಗಿದೆ.

ಅ.3 ರಂದು ಉಡುಪಿ ಜಿಲ್ಲೆಗೆ ರಾಜ್ಯಪಾಲರು ಆಗಮಿಸುವ ಹಿನ್ನೆಲೆಯಲ್ಲಿ ಮತ್ತು ಜನಸಾಮಾನ್ಯರಿಗೆ ತೊಂದರೆ ಆಗಬಾರದು ಎಂಬ ಉದ್ದೇಶದಿಂದ ಉಡುಪಿ ಜಿಲ್ಲೆ ಬಂದ್ ನಿರ್ಧಾರವನ್ನು ಕೈಬಿಡಲಾಗಿದೆ. ಆದರೆ ನಮ್ಮ ಮುಷ್ಕರ ಹಾಗೂ ಹೋರಾಟಗಳು ಮುಂದುವರೆಯಲಿದೆ ಎಂದು ಒಕ್ಕೂಟದ ಪ್ರಮುಖ ರಾಘವೇಂದ್ರ ಶೆಟ್ಟಿ ತಿಳಿಸಿದ್ದಾರೆ.