ಡೈಲಿ ವಾರ್ತೆ: 02/OCT/2023

ಬೆಂಗಳೂರು: ವಿಮಾನದಲ್ಲಿ ಎಮರ್ಜೆನ್ಸಿ ಬಾಗಿಲು ತೆಗೆದ ಭೂಪ- ಬಂಧನ

ಬೆಂಗಳೂರು: ವ್ಯಕ್ತಿಯೊಬ್ಬ ವಿಮಾನದಲ್ಲಿ ತುರ್ತು ಬಾಗಿಲನ್ನು ತೆರೆದಿರುವ ಘಟನೆ ಭಾನುವಾರ ಇಂಡಿಗೋ ವಿಮಾನವೊಂದರಲ್ಲಿ ನಡೆದಿದೆ. ವ್ಯಕ್ತಿಯನ್ನು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ.

ಶನಿವಾರ ರಾತ್ರಿ ನಾಗ್ಪುರದಿಂದ ಬ್ಯಾಂಕಾಕ್‌ಗೆ ಹೊರಟಿದ್ದ ಇಂಡಿಗೋ ವಿಮಾನ ಬೆಂಗಳೂರು ಮಾರ್ಗವಾಗಿ ತೆರಳುತ್ತಿತ್ತು. ಈ ವೇಳೆ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಸ್ವಪ್ನಿಲ್ ಹೊಲೆ (36) ತನ್ನ ಸೀಟಿನ ಪಕ್ಕದಲ್ಲಿದ್ದ ತುರ್ತು ಬಾಗಿಲನ್ನು ಎಳೆದಿದ್ದಾನೆ.

ನಾಗ್ಪುರದಲ್ಲಿ ಸ್ವಪ್ನಿಲ್ ವಿಮಾನ ಹತ್ತಿದ್ದು, ಆ ವಿಮಾನ 10:15 ಗಂಟೆಗೆ ಟೇಕ್ ಆಫ್ ಆಗಬೇಕಿತ್ತು. ಈ ವೇಳೆ ಆತ ತುರ್ತು ಬಾಗಿಲನ್ನು ತೆರೆಯಲು ಪ್ರಯತ್ನಿಸಿದ್ದಾನೆ. ನಂತರ ವಿಮಾನ 11:55ಕ್ಕೆ ಬೆಂಗಳೂರು ತಲುಪಿದೆ. ತಕ್ಷಣ ಆತನನ್ನು ಬಂಧಿಸಿದ ವಿಮಾನಯಾನ ಸಿಬ್ಬಂದಿ ಕೆಐಎ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ವ್ಯಕ್ತಿಯ ವಿರುದ್ಧ ಐಪಿಸಿ ಸೆಕ್ಷನ್ 336ರ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಈ ನಿಯಮದ ಪ್ರಕಾರ, ಮಾನವನ ಜೀವ ಅಥವಾ ಇತರರ ಸುರಕ್ಷತೆಗೆ ಅಪಾಯವನ್ನುಂಟು ಮಾಡುವ ಯಾವುದೇ ಕಾರ್ಯವನ್ನು ದುಡುಕಿನ ಅಥವಾ ನಿರ್ಲಕ್ಷ್ಯದಿಂದ ಮಾಡಿದರೆ ಆತನಿಗೆ ಜೈಲು ಶಿಕ್ಷೆಯನ್ನು 3 ತಿಂಗಳ ವರೆಗೆ ವಿಸ್ತರಿಸಬಹುದು. ಜೊತೆಗೆ 250 ರೂ. ದಂಡ ವಿಧಿಸಬಹುದು. ಇದೀಗ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಳೆದ ವರ್ಷ ಡಿಸೆಂಬರ್ 10 ರಂದು ಬೆಂಗಳೂರು ದಕ್ಷಿಣದ ಸಂಸದ ತೇಜಸ್ವಿ ಸೂರ್ಯ ಅವರು ಚೆನ್ನೈನಿಂದ ತಿರುಚಿರಾಪಳ್ಳಿಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಬೋರ್ಡಿಂಗ್ ಸಮಯದಲ್ಲಿ ಆಕಸ್ಮಿಕವಾಗಿ ತುರ್ತು ಬಾಗಿಲನ್ನು ತೆರೆದಿದ್ದರು. ಈ ವಿಚಾರ ತೀವ್ರ ವಿವಾದಕ್ಕೆ ಕಾರಣವಾಯಿತು. ಆ ನಂತರ ಇಂತಹುದೇ ಹಲವು ಘಟನೆಗಳು ವರದಿಯಾಗಿವೆ.