ಡೈಲಿ ವಾರ್ತೆ: 02/OCT/2023
ಕೋಟ: ECR ಕಾಲೇಜು ಹಣ ದುರುಪಯೋಗ – ದೂರು,ಪ್ರತಿದೂರು
ಕೋಟ: ಅಚ್ಲಾಡಿ ಗ್ರಾಮದ ಮಧುವನದಲ್ಲಿರುವ ಇಸಿಆರ್ (ECR) ಕಾಲೇಜಿನ ಎಜುಕೇಶನ್ ಅಂಡ್ ಚಾರಿಟೇಬಲ್ ಟ್ರಸ್ಟ್‌ನ ಹಣವನ್ನು ಆಡಳಿತ ಮಂಡಳಿಯವರು ದುರುಪಯೋಗ ಮಾಡಲಾಗಿದೆ ಎಂದು ಕೋಟ ಠಾಣೆಯಲ್ಲಿ ಎರಡು ದೂರುಗಳು ದಾಖಲಾಗಿದೆ.
ಮಣಿಪಾಲದ ಮಧು ಟಿ.ಬಿ ಅವರು ನೀಡಿದ ದೂರಿನಲ್ಲಿ ಅಚ್ಲಾಡಿ ಗ್ರಾಮದ ಮಧುವನ ಎಂಬಲ್ಲಿ Education and Charitable Trust ಎಂಬ ಸಂಸ್ಥೆಯನ್ನು ನಡೆಸಿಕೊಂಡು ಬಂದಿದ್ದು, ಸಂಸ್ಥೆಯಲ್ಲಿ ನಿರ್ದೇಶಕರಾಗಿ ಮಹಿಮಾ ಮತ್ತು ಟ್ರಸ್ಟಿಗಳಾಗಿರುವ ನಾಸೀರುದ್ದೀನ್ ಹಾಗೂ ಜೆಸ್ಸೀ ವರ್ಗೀಸ್ ರವರು ಟ್ರಸ್ಟಿಗಳಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. 2014 ರಲ್ಲಿ ಕೋಟದ ಸಾಲಿಗ್ರಾಮದ ವಿದ್ಯಾ ಸಂಸ್ಥೆಯಲ್ಲಿ ಮಹಿಮಾ ಅವರನ್ನು ಸೆಕ್ರೆಟರಿಯಾಗಿ ನೇಮಿಸಕೊಂಡಿರುತ್ತಾರೆ. 2021 ರಲ್ಲಿ ಮಹಿಮಾ ಸಂಸ್ಥೆಯ ವಿಧ್ಯಾರ್ಥಿಗಳಿಂದ ಪ್ರವೇಶ ಶುಲ್ಕವಾಗಿ ರೂ.6.80 ಲಕ್ಷ ಮತ್ತು ಚೆಕ್ ಹಾಳೆಗಳನ್ನು ದುರುಪಯೋಗಪಡಿಸಿಕೊಂಡು ಟ್ರಸ್ಟ್ ಖಾತೆಯಿಂದ ರೂ.9 ಲಕ್ಷ ಹಣವನ್ನು ಪಡೆದುಕೊಂಡು ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡಿರುತ್ತಾರೆ. ಇದಲ್ಲದೇ ಸೆಪ್ಟೆಂಬರ್ 29ರಂದು ನಾಸೀರುದ್ದೀನ್ ಅವರಿಗೂ ಬೈದು ಬೆದರಿಕೆ ಹಾಕಿದ್ದಾರೆ. ಮಹಿಮಾ ಇತರರೊಂದಿಗೆ ಸೇರಿಕೋಂಡು ಸಂಸ್ಥೆಯ ಸಂಪೂರ್ಣ ಹಕ್ಕು ಮತ್ತು ಆಸ್ತಿಯನ್ನು ಕಬಲಿಸುವ ಸಂಚು ನಡೆಸಿ, ಸಂಸ್ಥೆಯ ಹೆಸರು ಹಾಗೂ ಶೀಲ್ ದುರುಪಯೋಗ ಪಡಿಸಿಕೊಂಡು ನಕಲಿ ದಾಖಲೆ ಸೃಷ್ಠಿಸಿ, ಸಂಸ್ಥೆಯ ಖಾತೆಯಿಂದ ಹಣವನ್ನು ಅಕ್ರಮವಾಗಿ ಪಡೆದು ಸ್ವಂತಕ್ಕೆ ದುರುಪಯೋಗ ಪಡಿಸಿಕೊಂಡು ಮೋಸ ಮಾಡಿರುವುದಾಗಿ ಮಧು ಟಿ.ಬಿ ಕೋಟ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಪ್ರತಿದೂರು :
ಇನ್ನೊಂದೆಡೆ ಇಸಿಆರ್(ECR) ಕಾಲೇಜಿನ ಸೆಕ್ರೆಟರಿ ಆಗಿರುವ ಮಹಿಮಾ ಮಧು ಅವರು ನೀಡಿದ ದೂರಿನಂತೆ ವಿದ್ಯಾಸಂಸ್ಥೆಗೆ ಬಹಳ ವರ್ಷಗಳಿಂದ ಮಧು ಟಿ. ಭಾಸ್ಕರ್ ಅಧ್ಯಕ್ಷರಾಗಿ ಚೇರ್ ಮೆನ್ ಆಗಿ ಕಾಲೇಜಿನ ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳುತ್ತಿದ್ದಾರೆ. ವಿದ್ಯಾಸಂಸ್ಥೆಯ ಬೈಲಾ ಮೀರಿ, ಸೊಸೈಟಿ ಕಾಯ್ದೆ ಹಾಗೂ ನಿಯಮ ಉಲ್ಲಂಘಿಸಿ ಸ್ಥಳೀಯರಾದ ಸತೀಶ್, ಕೀರ್ತಿ , ಸೃಜನ್ ಕುಮಾರ್, ನವೀನ್ ಹಾಗೂ ಇತರ ಕೆಲವರನ್ನು ಸಂಸ್ಥೆಯ ಸದಸ್ಯರನ್ನಾಗಿ ನೇಮಕ ಮಾಡಿಕೊಂಡಿರುತ್ತಾರೆ. ಮಧು ಟಿ. ಭಾಸ್ಕರ್ ಅವರು ಮಹಿಮಾ ಮಧು ಅವರ ಸಹಿ ನಕಲಿ ಮಾಡಿ ಫೋರ್ಜರಿ ದಾಖಲೆಗಳನ್ನು ಸೃಷ್ಟಿಸಿ ಸಬ್ ರಿಜಿಸ್ಟ್ರಾರ್ ಕಛೇರಿಗೆ ಸಲ್ಲಿಸಿ, ಸಂಸ್ಥೆಗೆ ಹೊಸದಾಗಿ ನೇಮಿಸಿಕೊಂಡ ಸದಸ್ಯರಿಂದ ಬಹಳಷ್ಟು ಕೋಟಿ ಹಣವನ್ನು ಸಂಗ್ರಹಿಸಿ ಅವರಿಗೆ ಶೇ.50 ಪಾಲುದಾರಿಕೆ ಕೊಡುವುದಾಗಿ ನಂಬಿಸಿ ಕೋಟ್ಯಾಂತರ ರೂಪಾಯಿಯನ್ನು ತನ್ನ ಸ್ವಂತಕ್ಕಾಗಿ ಬಳಸಿಕೊಂಡಿದ್ದಾರೆ. ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹಲವಾರು ವಿದ್ಯಾರ್ಥಿಗಳಿಂದ ಬಹಳಷ್ಟು ಲಕ್ಷ ಹಣವನ್ನು ಅನಧಿಕೃತವಾಗಿ ನಗದು ರೂಪದಲ್ಲಿ ಪಡೆದುಕೊಂಡಿರುದ್ದಾರೆ ಎಂದೂ ದೂರಿನಲ್ಲಿ ತಿಳಿಸಿದ್ದಾರೆ. ಈ ಎಲ್ಲಾ ಕಾರಣಗಳಿಂದ ಮಧು ಟಿ. ಭಾಸ್ಕರ್ ಅವರನ್ನು ಸಂಸ್ಥೆಯಿಂದ ಶಾಶ್ವತವಾಗಿ ವಜಾ ಮಾಡಿರುರುವುದಾಗಿ ಕೋಟ ಠಾಣೆಗೆ ದೂರು ನೀಡಿದ್ದಾರೆ.