ಡೈಲಿ ವಾರ್ತೆ: 02/OCT/2023
ವರದಿ: ಅಬ್ದುಲ್ ರಶೀದ್ ಮಣಿಪಾಲ
ಕಾಪು:ಆಲದ ಮರ ಕಡಿಯುತ್ತಿದ್ದ ವೇಳೆ ದುರಂತ – ಮರ ಉರುಳಿ ಬಿದ್ದು ಕಾರ್ಮಿಕ ಮೃತ್ಯು – ಇಬ್ಬರಿಗೆ ಗಾಯ
ಕಾಪು: ಉಡುಪಿ ಜಿಲ್ಲೆಯ ಕಾಪು ತಾಲೂಕಿನ ಮಜೂರು ಗ್ರಾಮದ ಕರಂದಾಡಿಯಲ್ಲಿ ಆಲದ ಮರವನ್ನು ಕಡಿಯುತ್ತಿದ್ದ ವೇಳೆ ಮರ ಉರುಳಿ ಬಿದ್ದು ಕಾರ್ಮಿಕ ಮೃತಪಟ್ಟ ಘಟನೆ ಅ.2 ರಂದು ಸೋಮವಾರ ನಡೆದಿದೆ.
ಮೃತ ದುರ್ದೈವಿ ಕೂಲಿ ಕಾರ್ಮಿಕ ಬಿಹಾರ ಜಾರ್ಖಂಡ್ ಮೂಲದ ಸುಧೀರ್ ಪಾಂಜೆ ಎಂದು ಗುರುತಿಸಲಾಗಿದೆ.
ಮಜೂರು ಗ್ರಾಮದ ಕರಂದಾಡಿ ಶ್ರೀ ವಿಷ್ಣುಮೂರ್ತಿ ದೇವಸ್ಥಾನದ ಬಳಿಯ ಖಾಸಗಿಯವರಿಗೆ ಸೇರಿದ ನಾಗಬನವೊಂದರ ಮೇಲೆ ವಾಲಿದ್ದ ಬೃಹತ್ ಗೋಳಿಮರವನ್ನು ಕಡಿಯುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದ್ದು ಇದರಿಂದಾಗಿ ಮೂವರು ಕಾರ್ಮಿಕರು ಮರದಡಿಗೆ ಸಿಲುಕಿಕೊಂಡಿದ್ದರು. ಓರ್ವ ಮರದಡಿ ಸಿಲುಕಿ ಮೃತಪಟ್ಟಿದ್ದು ಇಬ್ಬರನ್ನು ರಕ್ಷಿಸಿ, ಉಡುಪಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ, ಕಾಪು ಎಸ್.ಐ. ಅಬ್ದುಲ್ ಖಾದರ್, ಕ್ರೈಂ ಎಸ್.ಐ. ಪುರುಷೋತ್ತಮ್ ಹಾಗೂ ಪೊಲೀಸ್ ಸಿಬಂದಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳೀಯರು ಮರ ತೆರವು ಮತ್ತು ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಕರಿಸಿದರು.