ಡೈಲಿ ವಾರ್ತೆ: 05/OCT/2023
ಹಿಂದೂ ಸಮಾಜೋತ್ಸವದ ಕಟೌಟ್ ತೆರವು: ವಿಹಿಂಪ, ಭಜರಂಗದಳ, ಬಿಜೆಪಿ ಅಸಮಾಧಾನ
ಉಡುಪಿ: ಶಿವಮೊಗ್ಗದ ಈದ್ ಮಿಲಾದ್ ಮೆರವಣಿಗೆಯಲ್ಲಿ ಯುವಕರ ಗುಂಪು ಪುಂಡಾಟ ಮೆರೆದಿತ್ತು. ಔರಂಗಜೇಬನ ಕಟೌಟ್, ಟಿಪ್ಪುವಿನ ಪತಾಕೆಗೆ ಪೊಲೀಸರು ಅಕ್ಷೇಪಿಸಿದ್ದು ಇದಕ್ಕೆ ಕಾರಣವಾಗಿತ್ತು. ಘಟನೆ ನಡೆಯುತ್ತಿದ್ದಂತೆ ಸರ್ಕಾರ ಎಲ್ಲಾ ಜಿಲ್ಲೆಗಳಿಗೆ ಕಟ್ಟುನಿಟ್ಟಿನ ಸೂಚನೆ ರವಾನಿಸಿದೆ. ಪ್ರಚೋದನಾತ್ಮಕ ಭಾವನೆಗಳಿಗೆ ಧಕ್ಕೆ ತರುವ ಬ್ಯಾನರ್, ಬಂಟಿಂಗ್ಸ್ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದೆ. ಈ ಸೂಚನೆಯ ಮೊದಲ ಪರಿಣಾಮ ಕರಾವಳಿ ಜಿಲ್ಲೆ ಉಡುಪಿ ಮೇಲೆ ಬಿದ್ದಿದೆ. ಅಕ್ಟೋಬರ್ 10 ಎಂಜಿಎಂ ಮೈದಾನದಲ್ಲಿ ಹಿಂದೂ ಸಮಾಜೋತ್ಸವ ನಿಗದಿಯಾಗಿದೆ. ಕಾರ್ಯಕ್ರಮಕ್ಕೆ ನಗರ ಸಿದ್ಧಗೊಳ್ಳುತ್ತಿದೆ. ಸರಕಾರದ ಸೂಚನೆಯಂತೆ ಎಸ್ ಪಿ ಡಾ. ಅರುಣ್ ಕೆ ಅವರು ಎಲ್ಲಾ ಅನಧಿಕೃತ ನಿಯಮಬಾಹಿರ ಕಟೌಟ್ ಗಳನ್ನು ತೆರವು ಮಾಡಲು ಸೂಚಿಸಿದ್ದಾರೆ.
ವಿಶ್ವ ಹಿಂದು ಪರಿಷತ್ ಭಜರಂಗದಳ ಬಿಜೆಪಿ ಮತ್ತು ಸಂಘ ಪರಿವಾರದ ಮುಖಂಡರು ನಗರದಲ್ಲಿ 30ಕ್ಕೂ ಹೆಚ್ಚು ಕಟೌಟ್ಗಳನ್ನು ಅಳವಡಿಸಿದ್ದರು. ಯಾವುದೇ ಮುನ್ಸೂಚನೆ ನೀಡಿದೆ ಉಡುಪಿ ನಗರಸಭೆ ಕಟಾವುಟಗಳನ್ನು ತೆರೆವು ಮಾಡಿದ್ದು ಆಯೋಜಕರ ಅಸಮಾಧಾನಕ್ಕೆ ಕಾರಣವಾಗಿದೆ. ವಿಶ್ವ ಹಿಂದೂ ಪರಿಷತ್ ಬಜರಂಗದಳ ಮುಖಂಡರು ಉಡುಪಿ ಬಿಜೆಪಿ ಶಾಸಕ ಯಶ್ ಪಾಲ ಸುವರ್ಣ ಈ ಬಗ್ಗೆ ಎಸ್ಪಿ ಜೊತೆ ಮಾತುಕತೆ ಮಾಡಿದ್ದಾರೆ. ನಿಯಮದ ಹೆಸರಿನಲ್ಲಿ ಸಿದ್ದರಾಮಯ್ಯ ಸರ್ಕಾರ ನಡೆಸಿರುವ ಹುನ್ನಾರ ಇದು. ಇಬ್ಬಗೆ ನೀತಿಯನ್ನು ಸರ್ಕಾರ ಪ್ರದರ್ಶಿಸುತ್ತಿದೆ ಎಂದು ಶಾಸಕ ಯಶ್ ಪಾಲ್ ಆರೋಪಿಸಿದ್ದಾರೆ.
ಶಿವಮೊಗ್ಗ ಘಟನೆ ನಂತರ ಕಠಿಣ ನಿಯಮವನ್ನು ಜಾರಿಗೆ ತರಲು ಸರ್ಕಾರದಿಂದ ಮೌಖಿಕ ಸೂಚನೆ ಬಂದಿದೆ. ನಗರಸಭೆಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಅಧಿಕಾರಿಗಳು ಆದೇಶವನ್ನು ಪಾಲಿಸಿದ್ದಾರೆ ಎಂದು ನಗರಸಭೆ ಪೌರಾಯುಕ್ತ ರಾಯಪ್ಪ ತಿಳಿಸಿದ್ದಾರೆ.
ತಿಂಗಳ ಹಿಂದೆ ಉಡುಪಿಯಲ್ಲಿ ಅಧಿಕಾರ ವಹಿಸಿಕೊಂಡ ಎಸ್. ಪಿ ಡಾ. ಅರುಣ್ ಹಲವಾರು ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಹಾಕಿದ್ದಾರೆ. ನಗರದ ಸೌಂದರ್ಯ ಕೆಡಿಸುವ ಡಿಜಿಟಲ್ ಬ್ಯಾನರ್ ಬಗ್ಗೆ ಸಾಕಷ್ಟು ದೂರುಗಳು ಬರುತ್ತಿದ್ದದ್ದರಿಂದ ಈ ವಿಚಾರದಲ್ಲೂ ನಿಯಮ ಬಿಗಿ ಮಾಡಿದ್ದಾರೆ. ಶೌರ್ಯ ಜಾಗರಣಾ ರಥಯಾತ್ರೆ ಹೆಸರಿನ ಕಾರ್ಯಕ್ರಮದ ಮೇಲೆ ಸರ್ಕಾರದ ನಿಯಮದ ಮೊದಲ ಪರಿಣಾಮ ಬಿದ್ದಿದೆ.