ಡೈಲಿ ವಾರ್ತೆ: 05/OCT/2023

ಉಡುಪಿ: ರೈಲಿನಲ್ಲಿ ಮಹಿಳೆಯ 5 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು: ಆರೋಪಿ ಬಂಧನ

ಉಡುಪಿ: ನೇತ್ರಾವತಿ ಎಕ್ಸ್‌ಪ್ರೆಸ್ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆಯ ಚಿನ್ನಾಭರಣಗಳು, ಕಾರ್ಡ್‌ಗಳು, ನಗದು ಇತ್ಯಾದಿಗಳಿದ್ದ ಬ್ಯಾಗ್‌ ಕಳವು ಮಾಡಿ ರೈಲಿನಲ್ಲಿ ಪರಾರಿಯಾಗುತ್ತಿದ್ದ ಆರೋಪಿಯನ್ನು ರೈಲ್ವೆ ಪೊಲೀಸರು ಕಾರ್ಯಾಚರಣೆ ನಡೆಸಿ 4 ಗಂಟೆಗಳ ಒಳಗೆ ಸೊತ್ತು ಸಹಿತ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ಬಂಧಿತ ಆರೋಪಿ ದೆಹಲಿ ಮೂಲದ ಸನ್ನಿ ಮಲ್ಹೋತ್ರಾ (30) ಎಂಬಾತನಾಗಿದ್ದು, 4,67,000 ರೂ. ಮೌಲ್ಯದ ಕದ್ದ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ.

ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಮಹಿಳೆ ಕರ್ತವ್ಯದಲ್ಲಿದ್ದ ಟಿಟಿ ಮೂಲಕ ದೂರು ನೀಡಿದ್ದು, ಕೂಡಲೇ ಆರ್‌ಪಿಎಫ್ ಉಡುಪಿಯ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

ಪ್ರಯಾಣಿಕರ ದೂರಿನ ಸ್ವೀಕೃತಿಯ ಆಧಾರದ ಮೇಲೆ ಶ್ರೀಕಾಂತ್ ಎನ್ನುವವರು ಪ್ಲಾಟ್‌ಫಾರ್ಮ್‌ನ ಕೊನೆಯಲ್ಲಿ ಒಬ್ಬ ಸಂಶಯಾಸ್ಪದ ವ್ಯಕ್ತಿ ಅನುಮಾನಾಸ್ಪದ ರೀತಿಯಲ್ಲಿ ಕುಳಿತಿರುವುದನ್ನು ಗಮನಿಸಿ ವಿಚಾರಣೆ ನಡೆಸಿದ್ದಾರೆ. ಪ್ರಯಾಣದ ಟಿಕೆಟ್ ಮಂಗಳೂರಿನಿಂದ ಮಡಗಾಂವ್ ಎನ್ನುವುದಾಗಿತ್ತು. ವಿಚಾರಣೆ ನಡೆಸುತ್ತಿದ್ದಾಗ ಶಂಕಿತ ವ್ಯಕ್ತಿ ಏಕಾಏಕಿ ಎಟಿಎಂ ಕಾರ್ಡ್ ಅನ್ನು ಪ್ಲಾಟ್‌ಫಾರ್ಮ್ ಪಕ್ಕದ ಪೊದೆಗಳ ಮೇಲೆ ಎಸೆದಿದ್ದಾನೆ. ಶ್ರೀಕಾಂತ್ ಪೊದೆಗಳಿಂದ ಎಟಿಎಂ ಕಾರ್ಡ್ ಸಂಗ್ರಹಿಸಿದ್ದಾರೆ. ವಿಚಾರಣೆಯಲ್ಲಿ, ಶಂಕಿತ ವ್ಯಕ್ತಿ ಸರಿಯಾದ ಉತ್ತರವನ್ನು ನೀಡಲಿಲ್ಲ.
ಅನುಮಾನಗೊಂಡ ಎಎಸ್‌ಐ ಸುಧೀರ್ ಅವರು ಸಿಬಂದಿಗಳೊಂದಿಗೆ ವಿಚಾರಣೆ ನಡೆಸಿ ಪರಿಶೀಲನೆ ನಡೆಸಿದ್ದಾರೆ. ಆರೋಪಿ ತನ್ನ ಹೆಸರನ್ನು ಸನ್ನಿ ಮಲ್ಹೋತ್ರಾ, ದೆಹಲಿ ಎಂದು ಹೇಳಿದ್ದಾನೆ.

ತೋಕೂರು ನಿಲ್ದಾಣದಲ್ಲಿ ಮಹಿಳೆಯ ಬ್ಯಾಗ್ ಕಳ್ಳತನ ಮಾಡಿದ್ದು, ರೈಲು ನಿಲ್ದಾಣದ ಹೊರಭಾಗದಲ್ಲಿ ನಿಧಾನವಾಗಿ ಚಲಿಸುತ್ತಿದ್ದ ವೇಳೆ ಕದ್ದ ಬ್ಯಾಗ್ ಸಮೇತ ತಪ್ಪಿಸಿಕೊಂಡಿದ್ದ. ಬ್ಯಾಗ್ ನಲ್ಲಿದ್ದ ನಗದು ಹಾಗೂ ಆಭರಣಗಳನ್ನು ತೆಗೆದುಕೊಂಡು ಹಳಿಯ ಬದಿಯ ಪೊದೆಗಳ ಮೇಲೆ ಬ್ಯಾಗ್ ಎಸೆದು, ಚಾಲನೆಯಲ್ಲಿದ್ದ ತಿರುನೆಲ್ವೇಲಿ – ದಾದರ್ ಎಕ್ಸ್‌ಪ್ರೆಸ್‌ಗೆ ಹತ್ತಿದ್ದಾನೆ. ಉಡುಪಿ ರೈಲು ನಿಲ್ದಾಣದಲ್ಲಿ ಇಳಿಸಿ, ಹುಡುಕಾಟ ನಡೆಸಿದಾಗ ಆತನ ಬಳಿ ಚಿನ್ನಾಭರಣಗಳು ಪತ್ತೆಯಾಗಿವೆ. ವಿವಿಧ ಸರಗಳು ಸೇರಿ 93.17 ಗ್ರಾಂ ಚಿನ್ನ, 4,67,620 ರೂ. ಅಂದಾಜು ಮೌಲ್ಯ ಮತ್ತು 3700 ರೂ. ನಗದು, ಎಟಿಎಂ ಕಾರ್ಡ್ ವಶಪಡಿಸಿಕೊಳ್ಳಲಾಗಿದೆ.

ಆರೋಪಿಯನ್ನು ಕಳವು ಮಾಡಿದ ಸೊತ್ತು ಸಹಿತ ಮಣಿಪಾಲ ಪಿಎಸ್‌ಐ ಅವರಿಗೆ ಹಸ್ತಾಂತರಿಸಲಾಗಿದ್ದು, ಮಣಿಪಾಲ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ ಐಆರ್ ಪ್ರಕಾರ ಒಟ್ಟು ಕಳ್ಳತನ ವಾದ ಚಿನ್ನಾಭರಣಗಳ ಒಟ್ಟು ಮೌಲ್ಯ 6,75,000 ರೂ. ಆಗಿದೆ.