ಡೈಲಿ ವಾರ್ತೆ: 07/OCT/2023
✒️ ಓಂಕಾರ ಎಸ್. ವಿ. ತಾಳಗುಪ್ಪ
ಸರ್ಕಾರ ಯೂಟರ್ನ್; ಆರ್‌ಟಿಐ ಅರ್ಜಿದಾರರ ಮಾಹಿತಿ ಸಂಗ್ರಹ ತೀರ್ಮಾನ ವಾಪಸ್
ಬೆಂಗಳೂರು: ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವವರ ಮಾಹಿತಿ ಸಂಗ್ರಹಕ್ಕೆ ಮುಂದಾಗಿದ್ದ ಸರ್ಕಾರ ತೀವ್ರ ಆಕ್ಷೇಪದ ನಡುವೆ ತನ್ನ ತೀರ್ಮಾನದಿಂದ ಹಿಂದೆ ಸರಿದಿದೆ.
ಸೆ.6ರಂದು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ ಎಲ್ಲಾ ಇಲಾಖೆ ಅಪರ ಮುಖ್ಯಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿಗಳಿಗೆ ಸೂಚನೆ ಕಳಿಸಿ, ಪ್ರತಿ ಮೂರು ತಿಂಗಳಿಗೊಮ್ಮೆ ಆರ್‌ಟಿಐ ಅರ್ಜಿದಾರರ ಮಾಹಿತಿ ಕಳಿಸುವಂತೆ ಸೂಚಿಸಿತ್ತು. ಇದಾದ ಬಳಿಕ ಸಾರ್ವಜನಿಕವಾಗಿ ಸಾಕಷ್ಟು ಟೀಕೆ ವ್ಯಕ್ತವಾಗಿತ್ತಲ್ಲದೇ, ಆರ್‌ಟಿಐ ಕಾರ್ಯಕರ್ತರು ಹೋರಾಟ ಸಂಘಟಿಸಿದ್ದರು. ಅಕ್ಟೋಬರ್ 6ರಂದು ಮಾಹಿತಿ ಆಯೋಗದ ಎದುರು ಹೋರಾಟ ನಡೆಸಲು ಸಿದ್ಧವಾಗಿದ್ದರು. ಜತೆಗೆ ರಾಜ್ಯಪಾಲರನ್ನು ಭೇಟಿ ಮಾಡುವುದಕ್ಕೂ ಪ್ರಯತ್ನ ನಡೆಸಿದ್ದರು.
ಈ ಮಾಹಿತಿ ಅರಿತ ಪೊಲೀಸರು ವಾಟ್ಸಪ್ ಅಂದೇಶ ಆಧರಿಸಿ ಶ್ರೀರಾಮ್ ಎಂಬುವರಿಗೆ ನೋಟಿಸ್ ಕೂಡ ಜಾರಿ ಮಾಡಿ ಪ್ರತಿಭಟನೆ ನಡೆಸದಂತೆ ಎಚ್ಚರಿಸಿದ್ದರು. ಇನ್ನೊಂದೆಡೆ ಪರಿಸ್ಥಿತಿ ತೀವ್ರತೆ ಅರಿತ ಮಾಹಿತಿ ಆಯೋಗ, ಹೆಚ್ಚಿನ ಪೊಲೀಸ್ ಭದ್ರತೆ ನೀಡುವಂತೆ ವಿಧಾನಸೌಧ ಪೊಲೀಸ್ ಠಾಣೆಗೆ ಮನವಿ ಕೂಡ ಸಲ್ಲಿಸಿದ್ದರು.
ಇಷ್ಟೆಲ್ಲ ಬೆಳವಣಿಗೆ ನಡುವೆ ಎಚ್ಚೆತ್ತ ಸರ್ಕಾರ, ಮಾಹಿತಿ ಕಲೆ ಹಾಕುವ ತನ್ನ ನಿರ್ಧಾರದಿಂದ ಹಿಂದೆ ಸರಿದಿದೆ.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಆದೇಶದ ಪ್ರಕಾರ ಸರ್ಕಾರದ ಅಧೀನ ಕಾರ್ಯದರ್ಶಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಆಸು- ತರಬೇತಿ ಮತ್ತು ಮಾಹಿತಿ ಹಕ್ಕು ಶಾಖೆ) (ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಆದೇಶ ಪಡೆಯದೇ) ತ್ರೈಮಾಸಿಕ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಆರ್‌ಟಿಐ ಅಡಿ ಅರ್ಜಿ ಸಲ್ಲಿಸುವ ಅರ್ಜಿದಾರರ ಮಾಹಿತಿಯನ್ನು ಒದಗಿಸುವ ಕುರಿತು ಪತ್ರ ಮೂಲಕ ಕೋರಿದ್ದರು. ಈ ಪತ್ರವನ್ನು ಸರ್ಕಾರದಿಂದ ಯಾವುದೇ ಅನುಮತಿ ಅಥವಾ ಗಮನಕ್ಕೆ ತರದೇ ಜಾರಿಯಾಗಿರುವ ಕಾರಣಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಹಿಂಪಡೆಯಲಾಗಿದೆ ಎಂದು ಇಲಾಖೆಯ ಪ್ರಧಾನ ಕಾರ್ಯದರ್ಶಿ ಮುನೀಷ್ ಮೌದ್ಗಿಲ್ ಎಲ್ಲಾ ಇಲಾಖೆ ಮುಖ್ಯಸ್ಥರಿಗೆ ಪತ್ರ ಹೊರಡಿಸಿದರು.
ಮಾಹಿತಿ ಹಕ್ಕು ಅಧಿನಿಯಮದಲ್ಲಿ ಮಾಹಿತಿ ಹಕ್ಕು ಕೇಳಿರುವ ಅರ್ಜಿದಾರರ ಬಗ್ಗೆ ಬೇರೆ ಯಾರೂ ಮಾಹಿತಿ ಪಡೆಯಲು ಅವಕಾಶ ಇರುವುದಿಲ್ಲ. ಎಲ್ಲಾ ನಾಗರೀಕರಿಗೆ ಮಾಹಿತಿ ಹಕ್ಕು ಅಧಿನಿಯಮದ ಪ್ರಕಾರ ಮುಕ್ತವಾಗಿ ಮಾಹಿತಿ ಪಡೆಯಲು ಶಾಸನ ಬದ್ಧ ಅಧಿಕಾರವಿರುತ್ತದೆ ಎಂಬ ಅಂಶವನ್ನು ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.