ಡೈಲಿ ವಾರ್ತೆ: 09/OCT/2023

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಭ್ರಷ್ಟಾಚಾರ ಪ್ರಕರಣ : ಕಾಂಗ್ರೆಸ್ ವತಿಯಿಂದ ಬೃಹತ್ ಪ್ರತಿಭಟನಾ ಜಾಥಾ

ಬ್ರಹ್ಮಾವರ -ದಕ್ಷಿಣ ಕನ್ನಡ ಸಕ್ಕರೆ ಕಾರ್ಖಾನೆ ಬ್ರಹ್ಮಾವರ ಇದರ ಗುಜರಿ ವಸ್ತುಗಳ ಮಾರಾಟದಲ್ಲಿ ನಡೆದಿದೆ ಎನ್ನಲಾದ ಬೃಹತ್ ಭ್ರಷ್ಟಾಚಾರದ ವಿರುದ್ದ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಬ್ರಹ್ಮಾವರದಲ್ಲಿ ಬೃಹತ್ ಪ್ರತಿಭಟನಾ ಜಾಥಾ ಜರಗಿತು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ಯ ಬಳಿಯಿಂದ ಆರಂಭವಾದ ಪ್ರತಿಭಟನಾ ಜಾಥಾ ಬ್ರಹ್ಮಾವರ ಬಸ್ ನಿಲ್ದಾಣದ ಬಳಿ ಸಮಾಪನಗೊಂಡು ಬೃಹತ್ ಜನಜಾಗೃತಿ ಸಭೆ ನಡೆಯಿತು.

ದಿಕ್ಸೂಚಿ ಭಾಷಣ‌ ಮಾಡಿದ ಕಾಂಗ್ರೆಸ್ ಮುಖಂಡರಾದ ಸುಧೀರ್ ಕುಮಾರ್ ಮರೊಳಿ ಮಾತನಾಡಿ “ನಾವು ಕಬ್ಬು, ಬೆಲ್ಲ, ಮಾಂಸ ತಿಂದು ಅರಗಿಸಿಕೊಂಡವರನ್ನು ನೋಡಿದ್ದೇವೆ. ಆದರೆ ಬ್ರಹ್ಮಾವರದಲ್ಲಿ ಆಡಳಿತ ಮಂಡಳಿ ಕಬ್ಬಿಣ ತಿಂದು‌ ಅರಗಿಸಿಕೊಂಡಿದೆ ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಯ ಕಂಚನ್ನೇ ತಿಂದು ಅರಗಿಸಿಕೊಂಡಿದ್ದಾರೆ. ಇಲ್ಲಿ ಬಿಡ್ಡುದಾರರಾಗಿ ಭಾಗವಹಿಸಿದ ಚೆನ್ನೈ ಮೂಲದ ಸಂಸ್ಥೆ ಯನ್ನು ಕರೆಸುವಲ್ಲಿಯೇ ಸಂಶಯ ಮೂಡುತ್ತಿದೆ. ನಗರಸಭೆ ಯಲ್ಲಿ ಕೂತು ಅಯುಕ್ತರಿಗೆ ದಮಕಿ ಹಾಕುವ ತಾಕತ್ತು ನಿಮಗೆ ಇರುವ ಉಡುಪಿ ಶಾಸಕ ಯಶ್ ಪಾಲ್ ಸುವರ್ಣ ನೀವು, ಈ ಭ್ರಷ್ಟಾಚಾರದ ಕುರಿತು ಮಾತನಾಡಬೆಕು ಇಲ್ಲದೇ ಹೋದಲ್ಲಿ ಮೊನ್ನೆಯ ಚುನಾವಣೆಯಲ್ಲಿ ಈ ಭ್ರಷ್ಟಾಚಾರದ ಹಣ ಕೂಡಾ ಬಳಕೆ ಆಗಿದೆ ಎಂದು ನಾವು ಹೇಳಬೇಕಾಗುತ್ತದೆ. ಆಸ್ಕರ್ ಫೆರ್ನಾಂಡಿಸ್ ಕನಸಿನ ಕೂಸು ಇದು ಅಂತಹ ನಾಯಕನಿಗೆ ನೋವಾಗಬಾರದು ಎಂಬ ಕಾರಣಕ್ಕಾಗಿ ಕಾಂಗ್ರೆಸ್ ಈ ಜನಜಾಗೃತಿ ಯನ್ನು ಆರಂಭಿಸಿದೆ‌.


“ರಿಯಲ್ ಎಸ್ಟೇಟ್ ಬೂಮ್ ನಲ್ಲಿ ಇದೆ‌ ಇಲ್ಲಿ, ಕ್ರಮೆಣ ಈ 110 ಎಕರೆ ಯನ್ನು ಬೇರೆ ಬೇರೆ ಕಾರಣ ಹೇಳಿ ಮಾರಾಟ ಮಾಡುವ ಕೆಲಸ ಆಗಬಹುದು. ಆಡಳಿತ ಮಂಡಳಿ ತಿಂದಿರುವ ಕಬ್ಬಿಣವನ್ನು ಕಕ್ಕಿಸಬೇಕಾದ ಅನಿವಾರ್ಯತೆ ಇದೆ. ಶೋಭಾ ಕರಂದ್ಲಾಂಜೆ ಬ್ರಹ್ಮಾವರ ಸಕ್ಕರೆ ಕಾರ್ಖಾನೆ ನನ್ನ ವ್ಯಾಪ್ತಿಗೆ ಬರುವುದಿಲ್ಲ ಎಂದು ಹೇಳಬೇಡಿ ಇದು ಕೃಷಿಗೆ ಸಂಬಂಧಿಸಿದ ಕಾರ್ಖಾನೆ ಹೀಗಾಗಿ ಕೃಷಿ ಸಚಿವರಾದ ನಿವು ಇದರ ಕುರಿತು ಮಾತನಾಡಲೇಬೇಕು” ಎಂದು ಆಗ್ರಹಿಸಿದರು.

ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ ಮಾತನಾಡಿ “ಪ್ರತಾಪ್ ಚಂದ್ರ ಶೆಟ್ಟಿಯವರ ರೈತ ಸಂಘ ಈ ಹಗರಣವನ್ನು ಬಯಲಿಗೆಳೆದು ಕಾನೂನು ಬದ್ದ ಹೋರಾಟಕ್ಕೆ ಚಾಲನೆ ನೀಡಿದ್ದಾರೆ. ಈ ಹಗರಣ ಆಗುವಾಗ ನಾವು ಕೈಕಟ್ಟಿ ಕುಳಿತುಕೊಳ್ಳುಲು ಸಾಧ್ಯವಿಲ್ಲ. ಆಸ್ಕರ್ ಫೆರ್ನಾಂಡಿಸ್ ಇಲ್ಲೆ ವಾಸ್ತವ್ಯ ಇದ್ದು ಸಕ್ಕರೆ ಕಾರ್ಖಾನೆ ನನ್ನ ಜೀವಾಳ ಎನ್ನುವಂತೆ ಸೇವೆ ಮಾಡಿದ್ದಾರೆ. ಆದರೆ ಬಿಜೆಫಿ ಮುಖಂಡರು ಅದನ್ನು ನಿರ್ನಾಮ ಮಾಡಲು ಚಾಲನೆ ಮಾಡಿದ್ದಾರೆ ಎಂದರು.


ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್ ಮಾತನಾಡಿ “೪೦ ವರ್ಷದ ಹಿಂದ ಆಸ್ಕರ್ ಫರ್ನಾಂಡೀಸ್ ಸಕ್ಕರೆ ಕಾರ್ಖಾನೆ ಸ್ಥಾಪಿಸಿ ಇಲ್ಳಿನ ರೈತರಿಗೆ ಆರ್ಥಿಕ ಸಹಾಯಕ್ಕಾಗಿ ಸ್ಥಾಪಿಸಿದರು. ಮತ್ತೆ ಕೆಲವೊಂದು ಕಾರಣಗಳಿಂದಾಗಿ ಇದು ನಷ್ಟಕ್ಕೆ ಒಳಗಾಗಿತು. ಆದರೂ ರೈತ ಮಕ್ಕಳ ಹಿತಕ್ಕಾಗಿ ಕಾಂಗ್ರೆಸ್ ಸರ್ಕಾರ ಅನುದಾನ ನೀಡುತಿತ್ತು. ಇದರ ಗುಜರಿ ಮಾರಾಟದಲ್ಲಿ ದೊಡ್ಡ ಮಟ್ಟದ ಅವ್ಯವಹಾರ ನಡೆದಿದ್ದು, ೨೨ ಲಕ್ಷ ಕೆಜಿ ಗುಜರಿ ಮಾರಾಟ ಮಾಡಿ ಕೇವಲ 11 ಲಕ್ಷ ಕೆಜಿ ಯ ಲೆಕ್ಕ ನೀಡಿದೆ. ಇದು ರೈತ ಮಕ್ಕಳಿಗೆ ಸೇರಿದ ಹಣ. ಕೃಷಿ ಉದ್ದಿಮೆಯನ್ನು ಸಂಪೂರ್ಣವಾಗಿ‌ ಬಿಜೆಪಿ ಸರಕಾರ ನಿರ್ನಾಮ ಮಾಡಿದೆ. ನಮ್ಮ ರಾಜ್ಯ ಸರಕಾರದಿಂದ ಈ ಅಪರಾಧದಲ್ಲಿ ಭಾಗಿಯಾದವರಿಗೆ ಜೈಲಿಗೆ ಸೇರಿಸಿಯೇ ಸಿದ್ದ” ಎಂದರು.‌


 ಪ್ರತಿಭಟನಾ ಸಭೆಯಲ್ಲಿ ಮಾಜಿ ಶಾಸಕರಾದ ಗೋಪಾಲ ಪೂಜಾರಿ ಬೈಂದೂರು, ವಿನಯ್ ಕುಮಾರ್ ಸೊರಕೆ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾದ ಅಶೋಕ್ ಕುಮಾರ್ ಕೊಡವೂರು, ಚಿಕ್ಕಮಗಳೂರು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಡಾಕ್ಟರ್ ಅಂಶುಮಾನ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ವಾಗ್ಳೆ, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್, ಜಿಲ್ಲಾ ಕಾಂಗ್ರೆಸ್ ಮುಖಂಡರಾದ ಪ್ರಸಾದ್ ರಾಜ್ ಕಾಂಚನ್, ದಿನೇಶ್ ಹೆಗ್ಡೆ ಮೊಳಹಳ್ಳಿ, ಎಂಎ ಗಫೂರ್, ಮುನಿಯಾಲು ಉದಯ್ ಕುಮಾರ್ ಶೆಟ್ಟಿ, ಪ್ರಖ್ಯಾತ್ ಶೆಟ್ಟಿ, ಕುಶಲ್ ಶೆಟ್ಟಿ, ಕಿಶನ್ ಹೆಗ್ಡೆ ಕೊಳ್ಕೆಬೈಲು, ವೆರೋನಿಕಾ ಕರ್ನೆಲಿಯೋ, ರೋಶನಿ ಒಲಿವೆರಾ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ರಮೇಶ್ ಕಾಂಚನ್, ದಿನಕರ ಹೇರೂರು, ಕಿಸಾನ್ ಕಾಂಗ್ರೆಸ್ ಅಧ್ಯಕ್ಷರಾದ ಶಶಿಧರ್ ಶೆಟ್ಟಿ ಉಪಸ್ಥಿತರಿದ್ದರು.