ಡೈಲಿ ವಾರ್ತೆ: 09/OCT/2023
ಪಾಣೆಮಂಗಳೂರು ಉಕ್ಕಿನ ಸೇತುವೆಯ ಮಧ್ಯಭಾಗದಲ್ಲಿ ಬಿರುಕು: ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ
ಬಂಟ್ವಾಳ : ಬ್ರಿಟಿಷ್ ಕಾಲದಲ್ಲಿ ನಿರ್ಮಾಣವಾದ ಪಾಣೆಮಂಗಳೂರು ಉಕ್ಕಿನ (ನೇತ್ರಾವತಿ) ಸೇತುವೆಯ ಮಧ್ಯಭಾಗದಲ್ಲಿ ಸಣ್ಣದಾದ ಬಿರುಕು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸೋಮವಾರ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಪಾಣೆಮಂಗಳೂರು ಕಡೆಯಿಂದ ಬಿ.ಸಿ.ರೋಡ್ ಕಡೆಗೆ ಬರುವಾಗ ಅಕ್ಕರಂಗಡಿ ಬಳಿ ಸುಮಾರು ನಾಲ್ಕು ಪಿಲ್ಲರ್ ಗಳ ಬಳಿಕ ಬಿರುಕು ಕಾಣಿಸಿಕೊಂಡಿದೆ. ಡಾಮರು ಎದ್ದು ಹೋಗಿದ್ದು ಸಣ್ಣ ಗುಂಡಿ ಯಾಗಿರುವುದು ಆದಿತ್ಯವಾರ ರಾತ್ರಿ ಕಂಡು ಬಂದಿದ್ದು ಈ ಬಗ್ಗೆ ಸ್ಥಳೀಯರು ತಕ್ಷಣ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
ಸೋಮವಾರ ಬಂಟ್ವಾಳ ತಹಶಿಲ್ದಾರ್, ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿದ್ದಾರೆ.
ಬಿರುಕು ಬಿಟ್ಟು ಅಪಾಯದಲ್ಲಿರುವ ಸ್ಥಳವನ್ನು ಪರಿಶೀಲನೆ ನಡೆಸಿದ್ದು ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಂಡಿದ್ದಾರೆ.
ಹಳೆಯ ಉಕ್ಕಿನ ಸೇತುವೆಯ ಆಯುಷ್ಯ ಮುಗಿದಿರುವ ಹಿನ್ನೆಲೆಯಲ್ಲಿ ನೂತನ ಸೇತುವೆ ನಿರ್ಮಾಣಗೊಂಡಿದ್ದು, ಬಳಿಕ ಇಲಾಖೆ ಆಯುಷ್ಯ ಮುಗಿದ ಈ ನೇತ್ರಾವತಿ ಸೇತುವೆಯಲ್ಲಿ ಘನ ವಾಹನಗಳ ಸಂಚಾರಕ್ಕೆ ಅವಕಾಶವಿಲ್ಲ ಎಂಬ ನಾಮಫಲಕವನ್ನು ಅಳವಡಿಸಿ ಅಪಾಯದ ಬಗ್ಗೆ ಎಚ್ಚರಿಕೆ ನೀಡಿತ್ತು.
ಅಪಾಯದ ಬಗ್ಗೆ ಮುನ್ಸೂಚನೆ ನೀಡಲಾಗಿತ್ತಾದರೂ ಪಾಣೆಮಂಗಳೂರು ಪೇಟೆಯನ್ನು ಉಳಿಸಬೇಕು ಎಂಬ ಕೆಲವರ ವಾದ ಮತ್ತು ಬೇಡಿಕೆಯನ್ನು ಮುಂದಿಟ್ಟುಕೊಂಡು ಎಂದಿನಂತೆ ಬಸ್ ಸಹಿತ ಇತರ ಘನ ವಾಹನಗಳು ಯಥೇಚ್ಛವಾಗಿ ಸಂಚಾರ ಆರಂಭಿಸಿದ್ದವು.
ಭಾನುವಾರ ರಾತ್ರಿ ವೇಳೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದರು. ಈ ಬಗ್ಗೆ ಸಂಬಂಧಪಟ್ಟ ಇಲಾಖೆಗೆ ಮಾಹಿತಿ ನೀಡಿದ್ದರು. ಅ ಬಳಿಕ ಕಂದಾಯ ಇಲಾಖೆ ವಾಟ್ಸಾಪ್ ಗ್ರೂಪ್ ನಲ್ಲಿ ಸೇತುವೆಯ ಆಪಾಯದ ಬಗ್ಗೆ ಚಿತ್ರ ಗಳನ್ನು ಹಾಕಿ ಸೂಚನೆ ನೀಡಿದ್ದರು.
ಸೋಮವಾರ ಬಂಟ್ವಾಳ ತಹಶಿಲ್ದಾರ್ ಎಸ್.ಬಿ.ಕೂಡಲಗಿ, ಪುರಸಭೆ ಅಧಿಕಾರಿಗಳು ಹಾಗೂ ಪೋಲಿಸ್ ಅಧಿಕಾರಿಗಳು ಸ್ಥಳಕ್ಕೆ ಬೇಟಿ ನೀಡಿ ಪರಿಶೀಲನೆ ನಡೆಸಿದ್ದಾರಾದರೂ ಈ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈ ಬಗ್ಗೆ ಮಾಹಿತಿಗಾಗಿ ತಹಶೀಲ್ದಾರ್ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಅವರು ಕರೆಗೆ ಸಿಕ್ಕಿರುವುದಿಲ್ಲ.
ಸೋಮವಾರವೂ ಯಾವುದೇ ಎಗ್ಗಿಲ್ಲದೆ ಇದೇ ಸೇತುವೆಯಲ್ಲಿ ಘನ ವಾಹನಗಳು ಎಂದಿನಂತೆ ಸಂಚಾರ ಮಾಡುತ್ತಿದ್ದವು. ಅಪಾಯಕಾರಿ ಸೇತುವೆಯ ಬಗ್ಗೆ ಇಲಾಖೆ ಮತ್ತು ಯಾವುದೇ ಸೂಚನಾ ಫಲಕಗಳನ್ನು ಕೂಡಾ ಅಳವಡಿಸಿಲ್ಲ ಎಂಬ ಆರೋಪಗಳು ಕೇಳಿ ಬಂದಿವೆ.