ಡೈಲಿ ವಾರ್ತೆ: 16/OCT/2023

ಕಾರ್ಕಳ ಕ್ಷೇತ್ರದ ಶಾಸಕ ಸುನಿಲ್ ಕುಮಾರ್ ಪರಶುರಾಮನ ಕಂಚಿನ ಪ್ರತಿಮೆಯೆಂದು ನಂಬಿಸಿ, ಪೈಬರ್ ಪ್ರತಿಮೆಯನ್ನು ಸ್ಥಾಪಿಸಿ ನಂಬಿಕೆ ದ್ರೋಹ ಎಸಗಿದ್ದಾರೆ – ಮುನಿಯಾಲು

ಕಾರ್ಕಳ: ಕಾರ್ಕಳದಲ್ಲಿ ಪರಶುರಾಮ ಮೂರ್ತಿ ಸ್ಥಾಪನೆಯಾಗಿದಾಗ ನಮಗೆ ಸಂತೋಷವಾಗಿತ್ತು. ಆದರೆ ಈಗ ಮೂರ್ತಿ ಸ್ಥಾಪನೆ ಹಿಂದಿನ ಅಸಲಿಯತ್ತು ಬಹಿರಂಗವಾಗಿದೆ. ಈ ಹಿನ್ನೆಲೆಯಲ್ಲಿ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಕಂಚಿನ ಪ್ರತಿಮೆ ಸ್ಥಾಪಿಸುತ್ತೇವೆ ಎಂದು ಉದಯ ಶೆಟ್ಟಿ ಮುನಿಯಾಲು ಹೇಳಿದರು.

ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ ಕಾರ್ಕಳ ಕ್ಷೇತ್ರ ಪರಶುರಾಮನ ಕಂಚಿನ ಪ್ರತಿಮೆಯೆಂದು ನಂಬಿಸಿ, ಪೈಬರ್ ಪ್ರತಿಮೆಯನ್ನು ಸ್ಥಾಪಿಸಿ ನಂಬಿಕೆ ದ್ರೋಹ ಎಸಗಿದ ಕಾರ್ಕಳ ಶಾಸಕ ಎ.ಸುನಿಲ್ ಕುಮಾರ್ ವಿರುದ್ಧ ಬೆಟ್ಟದ ಕೆಳಗೆ ಸೋಮವಾರ ನಡೆದ ಬೃಹತ್ ಪ್ರತಿಭಟನೆ ಸಭೆಯಲ್ಲಿ ಅವರು ಮಾತನಾಡಿದರು.

ಪರಶುರಾಮ ಪ್ರತಿಮೆ ವಿಚಾರದಲ್ಲಿ ಪ್ರತಿಭಟನೆ ಮಾಡಬೇಕಾಗಿ ಬಂದಿದ್ದು ದುರ್ದೈವ. ಈ ಬಗ್ಗೆನಿ ಜ ಸಂಗತಿಯನ್ನು ಜನರ ಮುಂದಿಡುತ್ತೇವೆ. ಅಷ್ಟೇ ಅಲ್ಲ ಹೋರಾಟ ಆರಂಭಿಸಿದ ದಿವ್ಯಾ ನಾಯಕ್ ವಿವೆಕ್ ಶೆಟ್ಟಿ ಅವರನ್ನು ಅಭಿನಂದಿಸಿವುದಾಗಿ ಈ ಸಂದರ್ಭದಲ್ಲಿ ತಿಳಿಸಿದರು.

ಪರಶುರಾಮ ಮೂರ್ತಿ ವಿಚಾರದಲ್ಲಿ ಬಿಜೆಪಿಗರ ಬಂಡವಾಳ ಬಹಿರಂಗಗೊಂಡಿದೆ. ಕಂಚಿನ ಬದಲಿಗೆ ಪೈಬರ್ ಮೂರ್ತಿ ನಿರ್ಮಿಸಿದ್ದಾರೆ. ಈ ಹಗರಣದ ಸತ್ಯ ಬೆಳಕಿಗೆ ತರಬೇಕು. ಧಾರ್ಮಿಕ ನಂಬಿಕೆಗೆ ಧಕ್ಕೆ ತಂದವರಿಗೆ ಶಿಕ್ಷೆಯಾಗಬೇಕು ಎಂದು ಮಾಜಿ ಸಚಿವ ವಿನಯಕುಮಾರ್ ಸೊರಕೆ ಆಗ್ರಹಿಸಿದರು.

ಪರಶುರಾಮ ಮೂರ್ತಿಯ ಉದ್ಘಾಟನೆಗೆ ಬಂದ ಸಿಎಂ ಆದರೂ ಮೂರ್ತಿ ಯಾವುದರಿಂದ ರಚನೆಯಾಗಿದೆ ಎನ್ನುವುದದ ಬಗ್ಗೆ ಯೋಚಿಸಬೇಕಿತ್ತು. ಧಾರ್ಮಿಕ ವಿಚಾರದಲ್ಲಿ ಜನರನ್ನು ಹಾದಿ ತಪ್ಪಿಸುವುದು ಬಿಜೆಪಿಯ ಚುನಾವಣಾ ಗಿಮಿಕ್ ಎಂದು ಆರೋಪಿಸಿದರು.
ಕಾಂಗ್ರೆಸ್ ಮುಖಂಡ ಸುಧೀರ್ ಮರೋಳಿ ಮಾತನಾಡಿ, ಸುಳ್ಳನ್ನು ಹೆಚ್ಚು ಸಮಯ ಮುಚ್ಚಿಡಲು ಸಾಧ್ಯವಿಲ್ಲ.ಜೋಳಿಗೆ ಹಿಡಿದು ಬರಿ ಕೈಯಲ್ಲಿ ಬಂದ ಸುನಿಲ್ ಜನರಿಂದ ಮತ ಭಿಕ್ಷೆ ಪಡೆದು ಗೆದ್ದು ನಕಲಿ ಮೂರ್ತಿ ನಿರ್ಮಿಸಿ ದ್ರೋಹ ಎಸಗಿದ್ದಾರೆ. ಅವರಿಗೆ ಈಗಲಾದರೂ ಪಶ್ಚಾತ್ತಾಪ ಆಗಬೇಕಿತ್ತು. ಇವರು ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿರಲು ನಾಲಾಯಕ್ಕು. ತಾಂತ್ರಿಕ ಅನುಮೋದನೆ ಇಲ್ಲದೆ ಮೂರ್ತಿ ತೆರವು ಕ್ರಿಮಿನಲ್ ಅಪೆನ್ಸ್ ಎಂದರು.

ಮಿಥುನ್ ರೈ ಮಾತನಾಡಿ, ತುಳುನಾಡ ಸೃಷ್ಟಿಕರ್ತ ಪರಶುರಾಮನಿಗೆ, ಧರ್ಮಕ್ಕೆ ಅಪಚಾರ ಆಗಿದೆ ವಿಶ್ವಹಿಂದೂ ಪರಿಷತ್, ಬಜರಂಗದಳ, ಹಿಂದೂ ಜಾಗರಣ ವೇದಿಕೆಯವರು. ಕಲ್ಲಡ್ಕ ಪ್ರಭಾಕರ್ ಭಟ್ ಈಗ ಎಲ್ಲಿದ್ದಾರೆ ಎಂದು ಪ್ರಶ್ನಿಸಿದರು.

ಪ್ರತಿಭಟನಾ ಸಭೆಯಲ್ಲಿ ಜಿಲ್ಲಾ ಕಾಂಗ್ರೆಸ್ ನಾಯಕರಾದ ವಿಕಾಸ್ ಹೆಗ್ಡೆ, ಪ್ರಸಾದ್ ರಾಜ್ ಕಾಂಚನ್, ಚಿಕ್ಕಮಗಳೂರಿನ ಡಾ| ಅಂಶು, ಗೋಪಾಲ್ ಪೂಜಾರಿ, ಮುಖಂಡ ದಿನೇಶ್ ಹೆಗ್ಡೆ ಮೊಳಹಳ್ಳಿ, ಹಿಂದುಳಿದ ವರ್ಗಗಳ ರಾಜ್ಯ ಉಪಾಧ್ಯಕ್ಷ ಡಿ.ಆರ್.ರಾಜು, ಕೆ.ಪಿಸಿಸಿ ಸದಸ್ಯ ನೀರೆ ಕೃಷ್ಣ ಶೆಟ್ಟಿ, ಸುರೇಂದ್ರ ಶೆಟ್ಟಿ, ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಅನಿತಾ ಡಿಸೋಜ, ಕಿಶನ್ ಹೆಗ್ಡೆ ಕೊಳಕೆಬೈಲು, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಂದ್ರಶೇಖರ ಬಾಯರಿ ಮತ್ತಿತರರು ಉಪಸ್ಥಿತರಿದ್ದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕೊಡವೂರು ಸ್ವಾಗತಿಸಿದರು. ಕಾರ್ಕಳ ಬ್ಲಾಕ್ ಕಾಂಗ್ರೆಸ್ ವಕ್ತಾರ ಶುಭದರಾವ್ ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಆರಂಭದಲ್ಲಿ ಕಾರ್ಕಳಾ ಪುಲ್ಕೆರಿಯಿಂದ ಬೈಲೂರು ಉಮಿಕಲ್ಲು ಬೆಟ್ಟದ ವರೆಗೆ ವಾಹನಗಳ ರ್‍ಯಾಲಿ ನಡೆಯಿತು.