ಡೈಲಿ ವಾರ್ತೆ: 17/OCT/2023

ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ “ತುರ್ತು ಪ್ರಥಮ ಚಿಕಿತ್ಸ ತರಬೇತಿ ಶಿಬಿರ”

ಹಳೆಯಂಗಡಿ: ಇಂಡಿಯನ್ ರೆಡ್ ಕ್ರಾಸ್ ಸೊಸೈಟಿ ಮಂಗಳೂರು ಇವರ ಸಹಕಾರದಲ್ಲಿ ರಿಲಯನ್ಸ್ ಅಸೋಸಿಯೇಷನ್(ರಿ) ಬೊಳ್ಳೂರು ಹಳೆಯಂಗಡಿ ಇದರ ವತಿಯಿಂದ ನಡೆದ “ತುರ್ತು ಪ್ರಥಮ ಚಿಕಿತ್ಸ ತರಬೇತಿ ಶಿಬಿರ” ಕಾರ್ಯಕ್ರಮ ಭಾನುವಾರ ರಿಲಯನ್ಸ್ ಭವನದಲ್ಲಿ ನಡೆಯಿತು.

ರಿಲಯನ್ಸ್ ನ ಅಧ್ಯಕ್ಷರಾದ ಕಲಂದರ್ ಕೌಶಿಕ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಪ್ರಥಮ ಚಿಕಿತ್ಸೆ ತರಬೇತಿ ಪಡೆಯುವುದು ಬಹಳಷ್ಟು ಅವಶ್ಯಕತೆ ಇದೆ. ಪ್ರಥಮ ಚಿಕಿತ್ಸೆಯಿಂದ ಪ್ರಾಣವನ್ನು ಉಳಿಸಿದ ನಿದರ್ಶನಗಳಿವೆ ಎಂದು ಹೇಳಿದರು.

ಜಿಲ್ಲಾ ಭಾರತೀಯ ರೆಡ್ ಕ್ರಾಸ್ ಸಂಸ್ಥೆಯ ತರಬೇತುದಾರ ಸಚೇತ್ ಸುವರ್ಣ ರವರು ಮಾತನಾಡಿ ವಿಶ್ವ ರೆಡ್‌ ಕ್ರಾಸ್‌ ಸಂಸ್ಥೆಯನ್ನು ಹೆನ್ರಿ ಡ್ಯೂನಾಂಟ್‌ ಎಂಬುವರು 1863ರಲ್ಲಿ ಹುಟ್ಟು ಹಾಕಿದರು. 1859ರಲ್ಲಿ ಇಟಲಿ, ಫ್ರಾನ್ಸ್‌ ಹಾಗೂ ಆಸ್ಟ್ರೀಯ ದೇಶಗಳ ನಡುವೆ ನಡೆದ ‘ಸಲ್ಫರಿನೊ’ ಯುದ್ಧದಲ್ಲಿ ಗಾಯಗೊಂಡ ಗಾಯಾಳುಗಳಿಗೆ ಚಿಕಿತ್ಸೆ ನೀಡಲು ಸ್ವಯಂ ಸೇವಾ ಸಂಸ್ಥೆಯಾದ ರೆಡ್‌ ಕ್ರಾಸ್‌ ಅನ್ನು ಸ್ಥಾಪಿಸಿದರು. ನಂತರ ಇದು ಅಂತಾರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆ, ಹಾಗೂ ರಾಷ್ಟ್ರೀಯ ರೆಡ್‌ಕ್ರಾಸ್‌ ಸಂಸ್ಥೆಯಾಗಿ ಇಡೀ ಪ್ರಪಂಚದಾದ್ಯಂತ ಸ್ಥಾಪನೆಯಾಯಿತು. ಭಾರತದಲ್ಲಿ 1920ರಲ್ಲಿ ರೆಡ್‌ಕ್ರಾಸ್‌ ಸಂಸ್ಥೆ ಆರಂಭವಾಯಿತು. ಇದರ ಕೇಂದ್ರ ಕಚೇರಿ ಹೊಸದಿಲ್ಲಿಯಲ್ಲಿದ್ದು, ದೇಶಾದ್ಯಂತ ಶಾಖೆಗಳನ್ನು ಹೊಂದಿದೆ. 1921ರಲ್ಲಿ ಕರ್ನಾಟಕದ ಶಾಖೆ ಆರಂಭವಾಯಿತು. ಸಂಸ್ಥೆಯು ಪ್ರಕೃತಿ ವಿಕೋಪ, ಆರೋಗ್ಯ ಕಾರ‍್ಯಕ್ರಮಗಳಲ್ಲಿ ಸಕ್ರಿಯ ಸೇವೆ ಒದಗಿಸುತ್ತಿದೆ ಎಂದು ಸಂಸ್ಥೆಯ ಬಗ್ಗೆ ಮಾಹಿತಿ ನೀಡಿದರು.

ಪ್ರಥಮ ಚಿಕಿತ್ಸೆ ಎಂದರೆ, ಗಾಯ ಅಥವಾ ಅವಘಡಗಳಾದಾಗ ಒದಗಿಸುವ ಆರಂಭಿಕ ಆರೈಕೆ ಎಂಬುದಾಗಿ ವ್ಯಾಖ್ಯಾನಿಸಬಹುದು. ಸಾಮಾನ್ಯವಾಗಿ, ಈ ಆರೈಕೆಯನ್ನು ತಜ್ಞರಲ್ಲದ ತರಬೇತಿ ಪಡೆದ ವೃತ್ತಿಪರ ವ್ಯಕ್ತಿಗಳು ರೋಗಿಗೆ ಅಥವಾ ಗಾಯಾಳುಗಳಿಗೆ, ಸರಿಯಾದ ವೈದ್ಯಕಿಯ ಚಿಕಿತ್ಸೆ ದೊರೆಯುವವರೆಗೆ ಒದಗಿಸುತ್ತಾರೆ. ಪ್ರಥಮ ಚಿಕಿತ್ಸೆ ಎಂಬುದು ಕೆಲವು ಸಂದರ್ಭಗಳಲ್ಲಿ ಸರಳ ಚಿಕಿತ್ಸೆಗಳ ಸರಣಿಯಾಗಿದ್ದರೆ, ಇನ್ನು ಕೆಲವು ಸಂದರ್ಭಗಳಲ್ಲಿ ಮಹತ್ವದ ಜೀವರಕ್ಷಕ ತಂತ್ರವಾಗಿರುತ್ತದೆ ಎಂದು ತರಬೇತಿಯ ಮಾಹಿತಿ ನೀಡಿದರು

ವೇದಿಕೆಯಲ್ಲಿ ರಿಲಯನ್ಸ್ ನ ಪ್ರಧಾನ ಕಾರ್ಯದರ್ಶಿ ಮುಬಾರಕ್ ಬೊಳ್ಳೂರು, ಹಳೆಯಂಗಡಿ ಗ್ರಾಮ ಪಂಚಾಯತ್ ಸದಸ್ಯ ಅಝೀಜ್ ಐ.ಏ.ಕೆ, ಮತ್ತು ಸಾಮಾಜಿಕ ಕಾರ್ಯಕರ್ತ ಅದ್ದಿ ಬೊಳ್ಳೂರು ಮತ್ತಿತರರು ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಸಂಸ್ಥೆಯ ಲೆಕ್ಕ ಪರಿಶೋಧಕ ಅಕ್ಬರ್ ಬೊಳ್ಳೂರು, ಜೊತೆ ಕಾರ್ಯದರ್ಶಿ ರಿಯಾಜ್ ಅಲ್ ಅಕ್ಷ, ಮಾಧ್ಯಮ ಉಸ್ತುವಾರಿ ಕಬೀರ್ ಇಂದಿರಾನಗರ, ಸಲೆಹೆಗಾರರಾದ ಸಿದ್ದಿಕ್ ಬೊಳ್ಳೂರು, ಶಮೀಮ್ ಬೊಳ್ಳೂರು, ಇಕ್ಬಲ್ ಎಂ.ಎ ಉಪಸ್ಥಿತರಿದ್ದರು.

ಸ್ಥಳೀಯ ಸಂಘ ಸಂಸ್ಥೆ ಫೇಮಸ್ ತೋಕೂರು, ಪೂಜಾ ಫ್ರೆಂಡ್ಸ್ ಇದರ ಪದಾಧಿಕಾರಿಗಳು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಬೊಳ್ಳೂರು, ಕದಿಕೆ, ಸಾಗ್ ಮಸೀದಿಯ ಸದಸ್ಯರು ಆಡಳಿತ ಮುಖ್ಯಸ್ಥರು ಮತ್ತು ಸಂಸ್ಥೆಯ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿ ಶಿಬಿರದ ಸದುಪಯೋಗ ಪಡೆದುಕೊಂಡರು.

ಕಾರ್ಯಕ್ರಮದ ಕೊನೆಯಲ್ಲಿ ಶಿಬಿರದಲ್ಲಿ ಭಾಗವಹಿಸಿದ 45 ಮಂದಿ ಸದಸ್ಯರಿಗೆ ರೆಡ್ ಕ್ರಾಸ್ ಸಂಸ್ಥೆಯ ಪ್ರಮಾಣ ಪತ್ರ ಗಣ್ಯರ ಸಮ್ಮುಖದಲ್ಲಿ ವಿತರಿಸಲಾಯಿತು.

ಸಂಸ್ಥೆಯ ಸಲಹೆಗಾರರಾದ ಆರಿಶ್ ನವರಂಗ್ ಕಾರ್ಯಕ್ರಮವನ್ನು ನಿರೂಪಿಸಿ ಕಬೀರ್ ಎ.ಆರ್ ವಂದಿಸಿದರು.