ಡೈಲಿ ವಾರ್ತೆ: 17/OCT/2023
ಶಿವಕಾಶಿಯ ಎರಡು ಪಟಾಕಿ ಘಟಕಗಳಲ್ಲಿ ಸ್ಫೋಟ: 11 ಮಂದಿ ಸಾವು!
ಚೆನ್ನೈ: ತಮಿಳುನಾಡಿನ ಶಿವಕಾಶಿಯ ಎರಡು ಪಟಾಕಿ ಘಟಕಗಳಲ್ಲಿ ಸಂಭವಿಸಿದ ಸ್ಫೋಟದಲ್ಲಿ ಒಂಬತ್ತು ಮಹಿಳೆಯರು ಸೇರಿದಂತೆ 11 ಜನರು ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.
ಎಂ. ಪುದುಪಟ್ಟಿಯಲ್ಲಿರುವ ಕನಿಷ್ಕರ್ ಹಾಗೂ ಅದರ ಪಕ್ಕದಲ್ಲಿರುವ ಪಟಾಕಿ ಅಂಗಡಿಗಳಲ್ಲಿ ಮಧ್ಯಾಹ್ನ ಸ್ಫೋಟ ಸಂಭವಿಸಿದೆ.
ವಿರುದುನಗರ, ಶಿವಕಾಶಿ, ವಾಟ್ರಪ್ ಮತ್ತು ಶ್ರೀವಿಲ್ಲಿಪುತ್ತೂರಿನಿಂದ ನಾಲ್ಕು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿವೆ. ಈವರೆಗೆ ಅಗ್ನಿಶಾಮಕ ಮತ್ತು ರಕ್ಷಣಾ ದಳದ ಸಿಬ್ಬಂದಿ 10 ಶವಗಳನ್ನು ಹೊರತೆಗೆದಿದ್ದಾರೆ.
ಕಳೆದ ಕೆಲವು ದಿನಗಳಿಂದ ಹವಾಮಾನ ಪರಿಸ್ಥಿತಿಯಿಂದಾಗಿ ಸರಿಯಾಗಿ ಒಣಗದ ಪಟಾಕಿಗಳ ಮಾದರಿ ಪರೀಕ್ಷೆಯ ಸಮಯದಲ್ಲಿ ಸ್ಫೋಟ ಸಂಭವಿಸಿದೆ ಎಂದು ಶಂಕಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಸುಮಾರು 20-25% ರಷ್ಟು ಸುಟ್ಟ ಗಾಯಗಳಾಗಿರುವ ಇತರೆ ಇಬ್ಬರು ಕಾರ್ಮಿಕರನ್ನು ಶ್ರೀವಿಲ್ಲಿಪುತ್ತೂರಿನ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಬೆಂಕಿ ಅವಘಡದ ನಂತರ ಘಟಕದಲ್ಲಿದ್ದ ಕಾರ್ಮಿಕರು ಓಡಿ ಹೋಗಿದ್ದು, ಸ್ಫೋಟದಲ್ಲಿ ಸುಟ್ಟು ಕರಕಲಾದ ಕಾರ್ಮಿಕರನ್ನು ಗುರುತಿಸುವ ಕಾರ್ಯ ನಡೆಯುತ್ತಿದೆ. ಘಟಕವು ಡಿಆರ್‌ಒ ಪರವಾನಗಿಯನ್ನು ಹೊಂದಿದೆ. ವಿರುದುನಗರ ಎಸ್‌ಪಿ ಶ್ರೀನಿವಾಸ ಪೆರುಮಾಳ್, ಜಿಲ್ಲಾ ಅಗ್ನಿಶಾಮಕ ಅಧಿಕಾರಿ ವಿವೇಕಾನಂದನ್ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.
ಕಿಚ್ಚನಾಯಕನಪಟ್ಟಿಯಲ್ಲಿ ನಡೆದ ಮತ್ತೊಂದು ಅಗ್ನಿ ಅವಘಡದಲ್ಲಿ 60 ವರ್ಷದ ವ್ಯಕ್ತಿಯೊಬ್ಬರು ಸುಟ್ಟು ಕರಕಲಾಗಿದ್ದಾರೆ. ನತಿಕುಡಿಯ ನಿವಾಸಿ ಪಿ.ವೆಂಬು (60) ಹೆಸರಿನ ಕಾರ್ಮಿಕ, ಘಟಕದ ಕೊಠಡಿಯೊಂದರಲ್ಲಿ ರಾಸಾಯನಿಕ ಮಿಶ್ರಣ ಮಾಡುವಾಗ ಬೆಂಕಿ ಕಾಣಿಸಿಕೊಂಡಿದೆ. ಮಾರನೇರಿ ಪೊಲೀಸರು ಘಟಕದ ಮುಖ್ಯಸ್ಥ ಗುರುಮೂರ್ತಿಯನ್ನು ಬಂಧಿಸಿದ್ದು, ಪರಾರಿಯಾಗಿರುವ ಮಾಲೀಕ ಮುತ್ತುವಿಜ್ಯನಿಗಾಗಿ ಶೋಧ ನಡೆಸುತ್ತಿದ್ದಾರೆ.
ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರು ಅವಘಡಕ್ಕೆ ಸಂತಾಪ ಸೂಚಿಸಿದ್ದು, ಮೃತರ ಕುಟುಂಬಕ್ಕೆ ತಲಾ 3 ಲಕ್ಷ ಹಾಗೂ ಗಾಯಗೊಂಡವರಿಗೆ ತಲಾ 1 ಲಕ್ಷ ಪರಿಹಾರ ಘೋಷಿಸಿದ್ದಾರೆ.