ಡೈಲಿ ವಾರ್ತೆ: 20/OCT/2023
ನವರಾತ್ರಿಗೆ “ಅವತಾರ್” ರೀತಿ ವೇಷ ಹಾಕಿ ಮೂವರು ಅಶಕ್ತರಿಗೆ ನೆರವಾಗಲು ಸುತ್ತಾಟ ಆರಂಭಿಸಿದ ಸರಪಾಡಿಯ ದೇವದಾಸ್ ನಾಯ್ಕ್
ಬಂಟ್ವಾಳ : ಸರಪಾಡಿ ಗ್ರಾಮದ ನೀರೊಲ್ಬೆ ನಿವಾಸಿ ದೇವದಾಸ್ ನಾಯ್ಕ್ ಅವರು ನವರಾತ್ರಿ ಸಂದರ್ಭದಲ್ಲಿ ಕಳೆದ ಮೂರು ವರ್ಷಗಳಿಂದ ವೇಷ ಹಾಕಿ ಸಂಗ್ರಹಗೊಂಡ ಮೊತ್ತವನ್ನು ಅಶಕ್ತರಿಗೆ ಹಂಚಿದ್ದು, ಈ ಬಾರಿ ಇಂಗ್ಲೀಷ್ ಚಿತ್ರ “ಅವತಾರ್” ರೀತಿ ವೇಷ ಹಾಕಿ ಮೂವರು ಅಶಕ್ತರಿಗೆ ನೆರವಾಗಲು ಸುತ್ತಾಟ ಆರಂಭಿಸಿದ್ದಾರೆ.
ಸರಪಾಡಿ ಶ್ರೀ ಶರಭೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಸುತ್ತಾಟ ಆರಂಭಿಸಿದ್ದು, ವಿಜಯ ದಶಮಿವರೆಗೆ ವೇಷ ಹಾಕಿ ಸಾಧ್ಯವಾದಷ್ಟು ಮೊತ್ತವನ್ನು ಸಂಗ್ರಹಿಸುವ ಗುರಿ ಹೊಂದಿದ್ದಾರೆ.
ಸಂಗ್ರಹಗೊಂಡ ಮೊತ್ತವನ್ನು ಮಣಿನಾಲ್ಕೂರು ಗ್ರಾಮದ ಕ್ಯಾನ್ಸರ್ ಪೀಡಿತರು, ಬಡ ಕುಟುಂಬದ ಯುವತಿಯ ಶಿಕ್ಷಣಕ್ಕೆ ಹಾಗೂ ಕೋಮಾ ಸ್ಥಿತಿಯಲ್ಲಿರುವ ಬೆಳ್ತಂಗಡಿಯ ವ್ಯಕ್ತಿಯೊಬ್ಬರಿಗೆ ನೀಡುವುದಾಗಿ ತಿಳಿಸಿದ್ದಾರೆ.
ಕಳೆದ ಬಾರಿ ಪೂರ್ತಿ ನವರಾತ್ರಿಯ ದಿನಗಳಲ್ಲಿ ವೇಷ ಹಾಕಿ ಸುಮಾರು 57 ಸಾವಿರ ಮೊತ್ತವನ್ನು ಸಂಗ್ರಹಿಸಿ ಎರಡು ಅಶಕ್ತ ಕುಟುಂಬಗಳಿಗೆ ನೀಡಿ ಉಳಿದ ಮೊತ್ತವನ್ನು ಸರಪಾಡಿ ದೇವಸ್ಥಾನದ ಜೀರ್ಣೋದ್ಧಾರ ಕಾರ್ಯಗಳಿಗೆ ನೀಡಿದ್ದರು. ತನ್ನ ವೇಷಕ್ಕೆ ಹೋಲುವ ರೀತಿಯಲ್ಲಿ ಬೈಕನ್ನು ಕೂಡ ವಿನ್ಯಾಸಗೊಳಿಸಿ ಅದರ ಮೂಲಕ ಸುತ್ತಾಟ ಆರಂಭಿಸಿದ್ದಾರೆ .