ಡೈಲಿ ವಾರ್ತೆ: 20/OCT/2023
ಅ.27 ಮತ್ತು 28 ರಂದು ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟ
ಬಂಟ್ವಾಳ : ದ.ಕ.ಜಿಲ್ಲಾ ಪಂಚಾಯತ್, ಶಾಲಾ ಶಿಕ್ಷಣ ಇಲಾಖೆ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಬಂಟ್ವಾಳ ಹಾಗೂ ತುಂಬೆ ಪ್ರೌಢ ಶಾಲೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಬಂಟ್ವಾಳ ತಾಲೂಕು ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಕ್ರೀಡಾಕೂಟವು ಅಕ್ಟೋಬರ್ 26 ಮತ್ತು 27 ರಂದು ಮಂಗಳೂರಿನ ಮಂಗಳಾ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ತುಂಬೆ ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಗಂಗಾಧರ ಆಳ್ವ ತಿಳಿಸಿದರು.
ಬಿ.ಸಿ.ರೋಡಿನ ಪ್ರೆಸ್ ಕ್ಲಬ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಬಂಟ್ವಾಳ ತಾಲೂಕು ಮಟ್ಟದ ಕ್ರೀಡಾಕೂಟವು ಪ್ರಥಮ ಬಾರಿಗೆ ಮಂಗಳೂರಿನ ಸಿಂಥೆಟಿಕ್ ಟ್ರ್ಯಾಕ್ ನಲ್ಲಿ ನಡೆಯಲಿದ್ದು ಕ್ರೀಡಾ ಪಟುಗಳಿಗೆ ಹೊಸ ಅನುಭವವನ್ನು ಹಾಗೂ ಮುಂದಿನ ಕ್ರೀಡಾ ಸಾಧನೆಗೆ ಅವಕಾಶವನ್ನು ಕಲ್ಪಿಸಿದಂತಾಗುತ್ತದೆ ಎಂದರು.
ಕ್ರೀಡಾ ಕೂಟವನ್ನು ರಾಜ್ಯ ವಿಧಾನಸಭೆಯ ಸಭಾಧ್ಯಕ್ಷ ಯು.ಟಿ.ಖಾದರ್ ಉದ್ಘಾಟಿಸಲಿದ್ದು, ಶಾಸಕರಾದ ರಾಜೇಶ್ ನಾಯ್ಕ್, ಅಶೋಕ್ ರೈ, ವಿಧಾನ ಪರಿಷತ್ ಸದಸ್ಯರು, ಮಾಜಿ ಸಚಿವ ಬಿ. ರಮಾನಾಥ ರೈ, ಬಂಟ್ವಾಳ ಕ್ಷೇತ್ರ ಶಿಕ್ಷಣಾಧಿಕಾರಿ ಮಂಜುನಾಥ ಎಂ.ಜೆ, ಹಾಗೂ ತುಂಬೆ ಮುಹಿಯುದ್ದೀನ್ ಎಜ್ಯುಕೇಶನಲ್ ಟ್ರಸ್ಟ್ ನ ಅಧ್ಯಕ್ಷ ಬಿ.ಅಬ್ದುಲ್ ಸಲಾಂ ಭಾಗವಹಿಸಲಿದ್ದಾರೆ ಎಂದರು.
ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಣಾಧಿಕಾರಿ ವಿಷ್ಣು ನಾರಾಯಣ ಹೆಬ್ಬಾರ್, ತುಂಬೆ ಶಿಕ್ಷಣ ಸಂಸ್ಥೆಯ ಮೆನೇಜರ್ ಅಬ್ದುಲ್ ಕಬೀರ್, ತುಂಬೆಯ ದೈಹಿಕ ಶಿಕ್ಷಣ ಶಿಕ್ಷಕ ಜಗದೀಶ್ ರೈ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.