ಡೈಲಿ ವಾರ್ತೆ: 21/OCT/2023
ಕೋಟೇಶ್ವರದಲ್ಲಿ ವೈಭವದ ಶಾರದೋತ್ಸವಕ್ಕೆ ಚಾಲನೆ: ದೇಶವನ್ನು ದೇವತೆಯ ರೂಪದಲ್ಲಿ ಕಾಣುವ ಏಕೈಕ ರಾಷ್ಟ್ರ ಭಾರತ – ಉಪನ್ಯಾಸಕ ಡಾ. ರಾಘವೇಂದ್ರ ರಾವ್
ಕುಂದಾಪುರ : ದೇಶವನ್ನು ದೇವತೆಯ ಸ್ವರೂಪದಲ್ಲಿ ಕಂಡು, ತಾಯಿ ಎಂದು ಆರಾಧಿಸುವ ವಿಶ್ವದ ಏಕೈಕ ರಾಷ್ಟ್ರ ಭಾರತ. ಸಕಲ ರತ್ನಗಳ ಆಗರವಾದ ಸಮುದ್ರ ರಾಜನೇ ಭಾರತಾಂಬೆಯ ಪಾದ ತೊಳೆಯುತ್ತಾನೆ. ಈಕೆ ಹಿಮಾಲಯವನ್ನೇ ಕಿರೀಟವಾಗಿ ಧರಿಸಿದ್ದಾಳೆ. ಜ್ಞಾನದ ಸುಧೆಯನ್ನೇ ಜಗತ್ತಿಗೆ ಹರಿಸಿದ ಋಷಿ ಮುನಿಗಳಿಗೆ, ಅತ್ಯಂತ ಶ್ರೇಷ್ಠ ರಾಜರ್ಷಿಗಳಾದ ಯುಧಿಷ್ಟಿರ, ಮಾಂಧಾತ, ಹರಿಶ್ಚಂದ್ರರಿಗೆ ಜನ್ಮಕೊಟ್ಟ ಮಾತೆ ಈಕೆ. ಇವಳ ಉದರದಲ್ಲಿ ನಾವೆಲ್ಲಾ ಹುಟ್ಟಿದ್ದೇವೆ. ಆದ್ದರಿಂದಲೇ ಈ ಪವಿತ್ರ ದೇಶವನ್ನು ಅಮ್ಮನಾಗಿ ಕಂಡು ನಾವು ಸ್ತುತಿ ಮಾಡುತ್ತೇವೆ. ಹೀಗೆ ದೇವಿಯನ್ನು ಆರಾಧಿಸುವ ಕಾರಣ ಮತ್ತು ವಿಧಾನದ ಹೆಮ್ಮೆಯ ವಿಷಯಗಳನ್ನು ನಾವಿಂದು ಸಮಾಜದ ಎದುರು ತೆರೆದಿಡಬೇಕಾಗಿದೆ – ಎಂದು ಉಡುಪಿಯ ಸಂಸ್ಕೃತ ಉಪನ್ಯಾಸಕ ಡಾ. ರಾಘವೇಂದ್ರ ರಾವ್ ಪಡುಬಿದ್ರೆ ಹೇಳಿದರು.
ಕೋಟೇಶ್ವರದ ಸಾರ್ವಜನಿಕ ಶ್ರೀ ಶಾರದೋತ್ಸವ ಸಮಿತಿಯ ಆಶ್ರಯದಲ್ಲಿ ನಡೆಯುತ್ತಿರುವ 11 ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವದ ಮೊದಲ ದಿನದ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಅವರು ಧಾರ್ಮಿಕ ಸಂದೇಶ ನೀಡಿದರು.
ಇಂದು ನಾವು ಎಲ್ಲೆಡೆ ಆಚರಿಸುವ ದೇವಿ ಆರಾಧನೆಯ ಮೂಲ ಮಾರ್ಕಾಂಡೇಯ ಪುರಾಣದಲ್ಲಿದೆ. ಮಾರ್ಕಾಂಡೇಯ ಮುನಿ ಕೌಷ್ತುತಿ ಎಂಬಾಕೆಗೆ ಹೇಳಿದ ದೇವಿ ಮಹಾತ್ಮೆಯ ಆಧಾರದಲ್ಲೇ ಇಂದಿನ ಆರಾಧನೆ ನಡೆಯುತ್ತಿದೆ. ನವರಾತ್ರಿಯ ಒಂಭತ್ತು ದಿನ ದೇವಿಯನ್ನು ಬೇರೆ ಬೇರೆ ರೂಪದಲ್ಲಿ ಆರಾಧಿಸಿ ವಿಶ್ವಕ್ಕೆ ಸುಭಿಕ್ಷವನ್ನು ನೀಡುವಂತೆ ಪ್ರಾರ್ಥಿಸಲಾಗುವುದು. ಕೇವಲ ವೇದ ಪರಿಣತರು ಮಾತ್ರ ಭೂಮಿಯನ್ನು ತಾಯಿ ಎನ್ನುವುದಲ್ಲ, ಆಶಿಕ್ಷಿತರೂ ಭೂಮಾತೆ ಎಂದೇ ಹೇಳುವರು. ನಮಗೆ ಈ ನಾಡಿನ ಬಗ್ಗೆ ಹೆಮ್ಮೆ, ಇಲ್ಲಿನ ಆರಾಧನೆಗಳಲ್ಲಿ ಶ್ರದ್ಧೆ ಇರಬೇಕು. ಸಾವಿರಾರು ವರ್ಷಗಳಿಂದಲೂ ಸಾವಿರಾರು ದಾಳಿಗಳಾದರೂ ನಮ್ಮ ಸಂಸ್ಕೃತಿ, ನಮ್ಮ ಧರ್ಮವನ್ನು ನಾಶಪಡಿಸಲು ಯಾರಿಂದಲೂ ಆಗಿಲ್ಲ. ನಮ್ಮ ನೆಲದ ಶ್ರೇಷ್ಠತೆಯನ್ನು ಇಂತಹ ಕಾರ್ಯಕ್ರಮಗಳ ಮೂಲಕ ಕಿರಿಯ ಜನಾಂಗದವರಿಗೂ ಪರಿಚಯಿಸಬೇಕು ಎಂದವರು ಕರೆ ನೀಡಿದರು.
ಶ್ರೀ ಶಾರದಾ ಕಲ್ಯಾಣ ಮಂಟಪದ ಮಾಲೀಕ ಎಚ್. ರಮೇಶ್ ಭಟ್ ದೀಪ ಬೆಳಗಿ ಮೂರು ದಿನಗಳ ಈ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಶ್ರೀ ಕೋಟಿಲಿಂಗೇಶ್ವರ ದೇವಳ ಸಮಿತಿಯ ಅಧ್ಯಕ್ಷ ಎಂ. ಪ್ರಭಾಕರ ಶೆಟ್ಟಿ, ಉದ್ಯಮಿ ರಾಧಾಕೃಷ್ಣ ಯು. ಮತ್ತು ಕೋಟೇಶ್ವರ ರೋಟರಿ ಅಧ್ಯಕ್ಷ ಜಗದೀಶ ಮಾರ್ಕೋಡು ಶುಭ ಹಾರೈಸಿದರು. ಕಾರ್ಯದರ್ಶಿ ಅಶೋಕ ಉಪಸ್ಥಿತರಿದ್ದರು.
ಉತ್ಸವ ಸಮಿತಿಯ ಅಧ್ಯಕ್ಷ ರಮೇಶ್ ದೇವಾಡಿಗ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.
ವೈಷ್ಣವಿ ಪ್ರಾರ್ಥಿಸಿದರು. ಉತ್ಸವ ಸಮಿತಿಯ ಪೂರ್ವಾಧ್ಯಕ್ಷ ವಾದಿರಾಜ್ ಹೆಬ್ಬಾರ್ ಸ್ವಾಗತಿಸಿದರು. ರತ್ನಾ ಖಾರ್ವಿ, ರಾಜೇಶ್, ಸುಬ್ರಹ್ಮಣ್ಯ ಶೆಟ್ಟಿ, ಭೋಜಣ್ಣ, ಪ್ರಭಾಕರ ಶೆಟ್ಟಿಗಾರ್ ಗಣ್ಯರನ್ನು ಗೌರವಿಸಿದರು. ಕೋಶಾಧಿಕಾರಿ ಆನಂದ ಕುಂದರ್ ವಂದಿಸಿದರು.
ಸಭೆಯ ನಂತರ ಪರಿಸರದ ಪ್ರತಿಭೆಗಳ ಪ್ರತಿಭಾ ಪ್ರದರ್ಶನ “ಭಾವ ತೀರ ಯಾನ – 2023” ಎಂಬ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.