ಡೈಲಿ ವಾರ್ತೆ: 24/OCT/2023
ಅವ್ಯವಸ್ಥೆಯ ಅಗರವಾದ ಕುಂದಾಪುರದ ಉರೂಸ್ – ಹಸಿದ ಹೊಟ್ಟೆಯಲ್ಲಿ ತೆರಳಿದ ಮಹಿಳಾ ಪ್ರವಾಸಿಗರು
ಕುಂದಾಪುರ: ಹಸಿದ ಹೊಟ್ಟೆಯಲ್ಲಿ ನಿನ್ನ ದ್ವೇಷಿಯೇ ಆಗಮಿಸಲಿ ಅವನಿಗೊಂದು ತುತ್ತು ನೀಡಿಯೇ ಕಳುಹಿಸು ಹಾಗಂತ ಪವಿತ್ರ ಇಸ್ಲಾಂ ಭೋದಿಸುತ್ತದೆ. ಆದರೆ ಕಾರಣೀಕ ದರ್ಗಾ ಎಂದೇ ಜನಜನಿತವಾದ ಕುಂದಾಪುರದ ಇತಿಹಾಸ ಪ್ರಸಿದ್ಧ ಹಜ್ರತ್ ಸುಲ್ತಾನ್ ಸಯ್ಯದ್ ಯೂಸುಫ್ ವಲಿಯುಲ್ಲಾ ದರ್ಗಾ ವತಿಯಿಂದ ಅ. 23 ರಂದು ನಡೆದ ಚಾರಿತ್ರಿಕ ಉರೂಸ್ ಸಮಾರಂಭದಲ್ಲಿ ಹಸಿದು ಬಂದ ಪರವೂರಿನ ಮಹಿಳಾ ಪ್ರವಾಸಿಗ ಭಕ್ತರಿಗೆ ಊಟವಿಲ್ಲ ಎಂದು ಹಸಿದ ಹೊಟ್ಟೆಯಲ್ಲಿಯೇ ವಾಪಾಸು ಕಳಿಸಿದ ಅಮಾನವೀಯ ಘಟನೆ ಸದ್ದು ಮಾಡಿದೆ.
ತಲೆತಲಾಂತರದಿಂದ ನಡೆದು ಬರುತ್ತಿರುವ ಕುಂದಾಪುರ ದರ್ಗಾದ ಉರೂಸಿಗೆ ಅದರದ್ದೇ ಆದ ಚರಿತ್ರೆಯಿದೆ ಘನತೆಯಿದೆ ವರ್ಷಕ್ಕೊಮ್ಮೆ ಜರಗುವ ಇಲ್ಲಿನ ಉರೂಸ್ ಅಂದರೆ ಅದೊಂದು ದೊಡ್ಡ ಹಬ್ಬದಂತೆ, ಸಂಭ್ರಮದಂತೆ, ಈ ಉರೂಸ್ ನಲ್ಲಿ ಜಾತಿ, ಮತ ಭೇದವಿಲ್ಲದೆ ಊರು, ಪರವೂರುಗಳಿಂದ ಅಸಂಖ್ಯಾತ ಭಕ್ತರು ಆಗಮಿಸಿ ಕೋಳಿ ಕುರಿಗಳನ್ನು ಹರಕೆಯ ರೂಪದಲ್ಲಿ ಅರ್ಪಿಸುತ್ತಾರೆ ಪ್ರಸಾದ ರೂಪದಲ್ಲಿ ಬಡಿಸಲಾಗುವ ಗಿರೈಸ್ ಕೂರ್ಮಾವನ್ನು ಹೊಟ್ಟೆತುಂಬಾ ಉಂಡು ತಮ್ಮ ಪ್ರಾರ್ಥನೆಗಳನ್ನು ಸಲ್ಲಿಸಿ ತೆರಳುತ್ತಾರೆ . ಕೆಲವರು ಪಾರ್ಸೆಲ್ ಮೂಲಖವೂ ಪ್ರಸಾದವನ್ನು ಒಯ್ಯುತ್ತಾರೆ.
ಇದು ಈ ಚಾರಿತ್ರಿಕ ದರ್ಗಾದ ಉರೂಸ್ ನಲ್ಲಿ ಅನೂಚಾನವಾಗಿ ನಡೆದು ಬಂದ ಪದ್ಧತಿ.
ಇಲ್ಲಿಗಾಗಮಿಸುವ ಮಹಿಳಾಭಕ್ತರ ಸಂಖ್ಯೆಯೂ ಅಗಣಿತ. ವಿಶೇಷ ವೆಂದರೆ ಇಲ್ಲಿ ಮಹಿಳೆಯರಿಗೆ ಬಡಿಸುವ ಪದ್ಧತಿ ಇಲ್ಲವೆಂಬ ಹುಕುಂ ಅದ್ಯಾವಾಗ ಜಾರಿಯಾಯ್ತೋ ಗೊತ್ತಿಲ್ಲ, ಆದರೆ ಕೆಲವು ವರ್ಷಗಳ ಹಿಂದಿನಿಂದ ಇಲ್ಲಿ ಬಡಿಸಲಾಗುತ್ತಿದ್ದ ಹಾಗೂ ಪ್ರಸಾದ ರೂಪದಲ್ಲಿ ವಿತರಿಸಲಾಗುತ್ತಿದ್ದ ಗಿರೈಸ್ ಅನ್ನು ಧರ್ಮಾರ್ಥವಾಗಿ ಬಡಿಸುವುದರ ಜತೆ ಪ್ಯಾಕೇಟುಗಳನ್ನು ಮಾಡಿ 200, 300 ರೂಪಾಯಿಗಳಿಗೆ ಮಾರಾಟ ಮಾಡುವ ಕ್ರಮವನ್ನು ಜಾರಿಗೆ ತರಲಾಯಿತು ಆದರೂ ಯಾವುದೇ ತಂಟೆ ತಕರಾರಿಲ್ಲದ ಇಲ್ಲಿನ ಉರೂಸ್ ಮಾತ್ರ ವಿಜೃಂಭಣೆಯಿಂದ ಜರಗುತ್ತಿತ್ತು.
ಆದರೆ ಇದಕ್ಕೆಲ್ಲಾ ಅಪವಾದವೆಂಬಂತೆ ಈ ಬಾರಿಯ ಉರೂಸ್ ಮಾತ್ರ ಅವ್ಯವಸ್ಥೆಯ ಅಗರವಾಗಿ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ. ಪ್ಯಾಕೆಟ್ಟುಗಳನ್ನು ಮದ್ಯಾಹವೇ ಅಸಮರ್ಪಕವಾಗಿ ವಿತರಿಸಲು ಆರಂಭಿಸಿದ್ಧರಿನಿಂದ ಪ್ಯಾಕೇಟುಗಳು ಕಡಿಮೆಯಾಗಿ ಭಕ್ತರು ಪರದಾಡುವಂತಾಯ್ತು.
ಇನ್ನು ಸಂಜೆ ಭೋಜನ ಆರಂಭಗೊಂಡಾಗ ಊರ ಹಾಗೂ ಪರ ಊರಿಂದ ಬಂದಂತಹ ಮಹಿಳೆಯರಿಗೆ ಊಟ ನೀಡದೆ ಬರಿಗೈಯಲ್ಲಿ ವಾಪಸು ಕಳಿಸಿದ ಘಟನೆ ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ಉರೂಸ್ ಗೆ ಬಂದಂತಹ ಮಹಿಳೆಯರಿಗೆ ಅಲ್ಲಿ ಉಣ ಬಡಿಸದಿದ್ದರೂ ಪರವಾಗಿಲ್ಲ ಆದರೆ ಅನ್ನದ ಪ್ಯಾಕೆಟ್ ನೀಡಬಹುದಿತ್ತು ಎನ್ನುವ ಮಾತು ಭಕ್ತರಲ್ಲಿ ಕೇಳಿ ಬರುತ್ತಿದೆ.
ದರ್ಗಾ ಕಮಿಟಿಯ ಆಡಳಿತ ಮಂಡಳಿಯವರೇ ನೀವು ಈ ರೀತಿ ತಾರತಮ್ಯ ಮಾಡುತ್ತಿರುವುದು ಸರಿಯೋ, ತಪ್ಪೋ ಅಂತ ವಿಮರ್ಶೆ ಮಾಡಿಕೊಳ್ಳಿ ಅವಾಗ ನಿಮಗೆ ಉತ್ತರ ಸಿಗಬಹುದು.
ಯಾವುದೇ ಅವುಲಿಯಾಕಗಳು ಮಹಿಳೆಯರಿಗೆ ಊಟ ಕೊಡಬೇಡಿ ಅಂತ ಖಂಡಿತ ಹೇಳುವುದಿಲ್ಲ. ಆದರೆ ಕೆಲವೊಂದು ಕಲ್ಲು ಹೃದಯದವರಿಂದ ಇಂತಹ ಪ್ರಸಂಗ ಒದಗಿ ಬರುತ್ತದೆ.
ಸಹೋದರರೇ ಇನ್ನಾದರೂ ಎಚ್ಚೆತ್ತುಕೊಂಡು ಎಲ್ಲರನ್ನು ಸಮಾನವಾಗಿ ನೋಡಿ. ಪರ ಊರಿಂದ ಉರೂಸಿಗೆ ಬಂದಂತಹ ಮಹಿಳೆಯರಿಗೆ ಒಂದು ತುತ್ತು ಊಟ ನೀಡದೆ ಬರಿಗೈಯಲ್ಲಿ ವಾಪಸ್ ಕಳಿಸಬೇಡಿ.