ಡೈಲಿ ವಾರ್ತೆ: 27/OCT/2023

ಪೋಕ್ಸೋ ಪ್ರಕರಣ: ಪೊಲೀಸರಿಂದ ಸಂತ್ರಸ್ತೆಗೆ ಮಾನಸಿಕ ಕಿರುಕುಳ ಆರೋಪ!

ಹುಬ್ಬಳ್ಳಿ: ಪೋಕ್ಸೋ ಪ್ರಕರಣವೊಂದರಲ್ಲಿ ಬಾಲಾರೋಪಿಯನ್ನು ವಿಚಾರಣೆ ನಡೆಸದೆ ಬಿಟ್ಟು ಕಳುಹಿಸಿ, ಸಂತ್ರಸ್ತ ಹೆಣ್ಣು ಮಗುವಿಗೆ ಹಾಗೂ ಆಕೆಯ ಕುಟುಂಬಕ್ಕೆ ಮಾನಸಿಕ ಕಿರುಕುಳ ನೀಡಿರುವ ಆರೋಪ ಪೊಲೀಸರ ವಿರುದ್ಧ ಕೇಳಿಬಂದಿದೆ.

ಹುಬ್ಬಳ್ಳಿ ಕಸಬಾಪೇಟ್ ಪೊಲೀಸರು ಬಾಲ್ಯವಿವಾಹ ಮತ್ತು ಪೋಕ್ಸೋ ಅಡಿ ಪ್ರಕರಣದ ವಿಚಾರಣೆಯಲ್ಲಿ ನಿಯಮ ಉಲ್ಲಂಘಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಅ.12 ರಂದು ಬಾಲ್ಯವಿವಾಹ ಹಾಗೂ ಪೋಕ್ಸೋ ಅಡಿ ಕಸಬಾಪೇಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಬಗ್ಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ ಠಾಣೆ ಇನ್ಸ್‍ಪೆಕ್ಟರ್ ರಾಘವೇಂದ್ರ ಹಳ್ಳೂರು ಕಾನೂನು ಉಲ್ಲಂಘನೆ ಮಾಡಿ ಮಕ್ಕಳ ಪಾಲಕರಿಲ್ಲದೆ ನೂರಾರು ಕಿಮೀ ದೂರ ಸಂತ್ರಸ್ತೆಯನ್ನು ಕರೆದೊಯ್ದು ಪಂಚನಾಮೆ ಮಾಡಿದ್ದಾರೆ. ಅಲ್ಲದೇ ಯಾವುದೇ ವಿಚಾರಣೆ ಇಲ್ಲದೆ ಬಾಲಾರೋಪಿಯನ್ನು ಮೊದಲೇ ಬಿಟ್ಟು ಕಳುಹಿಸಿದ್ದಾರೆ. ಬಳಿಕ ನಡುರಸ್ತೆಯಲ್ಲಿ ಸಂತ್ರಸ್ತೆ ಹಾಗೂ ಆಕೆಯ ತಾಯಿಗೆ ವಿಚಾರಣೆ ನೆಪದಲ್ಲಿ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಲಾಗಿದೆ.

ಪ್ರಕರಣದ ಬಾಲಾರೋಪಿಯನ್ನು ಮನೆಗೆ ಕಳುಹಿಸಿ, ಸಂತ್ರಸ್ತೆ ಹಾಗೂ ಆಕೆಯ ಕುಟುಂಬಸ್ಥರಿಗೆ ಕಿರುಕುಳ ನೀಡಿರುವುದು ಪ್ರಕರಣದಲ್ಲಿ ಅನುಮಾನ ಮೂಡುವಂತೆ ಮಾಡಿದೆ.