ಡೈಲಿ ವಾರ್ತೆ: 27/OCT/2023

ಮೆಲ್ಕಾರ್:ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ಜಗಳ – ಮೂವರಿಗೆ ಚೂರಿ ಇರಿತ

ಬಂಟ್ವಾಳ : ಎರಡು ತಂಡಗಳು ನಡುವಿನ ಜಗಳದಲ್ಲಿ ಚೂರಿ ಹಿರಿತ ನಡೆದಿದ್ದು ಮೂವರು ಗಾಯಗೊಂಡ ಘಟನೆ ಗುರುವಾರ ರಾತ್ರಿ ಮೆಲ್ಕಾರ್ ನಲ್ಲಿ ನಡೆದಿದೆ.

ಬೋಳಂಗಡಿ ನಿವಾಸಿಗಳಾದ ದೇವದಾಸ್, ಸಂದೀಪ್, ಶಂಕರ್ ಚೂರಿ ಇರಿತಕ್ಕೊಳಗಾಗಿದ್ದು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಬೋಳಂಗಡಿ ನಿವಾಸಿ ಶೋಧನ್, ಕಲ್ಲಡ್ಕ ನಿವಾಸಿ ಯತೀಶ್, ಮೆಲ್ಕಾರ್ ನಿವಾಸಿಗಳಾದ ಚೇತನ್, ಪ್ರಸನ್ನ, ಪ್ರದೀಪ್ ಮತ್ತು ಪ್ರಕಾಶ್ ಅವರ ತಂಡ ಹಲ್ಲೆ ಮಾಡಿದ್ದಲ್ಲದೆ ಚೂರಿಯಿಂದ ಇರಿದಿದ್ದಾರೆ ಎಂದು ಅವರು ಬಂಟ್ವಾಳ ನಗರ ಪೋಲೀಸ್ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಪಾಣೆಮಂಗಳೂರು ಶಾರದೋತ್ಸವ ಮೆರವಣಿಗೆ ವೇಳೆ ಎರಡು ತಂಡಗಳ ನಡುವೆ ನಡೆದ ಗಲಾಟೆ ಮುಂದುವರಿದ ಭಾಗವಾಗಿ ಗುರುವಾರ ರಾತ್ರಿ ಚೂರಿ ಇರಿತ ನಡೆದಿದೆ ಎನ್ನಲಾಗಿದೆ.
ಕೆಲ ವರ್ಷಗಳ ಹಿಂದೆ ಜೊತೆಯಾಗಿ ಹುಲಿ ವೇಷ ಹಾಕಿ ಶಾರದ ವಿಸರ್ಜನೆ ಮೆರವಣಿಗೆಯಲ್ಲಿ ಹೆಜ್ಜೆಯಾಕುತ್ತಿದ್ದ ಯುವಕರ ತಂಡವು ಯಾವುದೋ ವಿಚಾರಕ್ಕೆ ಇಬ್ಬಾಗವಾಗಿದ್ದು ಇದೀಗ ಪ್ರತ್ಯೇಕ ಹುಲಿ ವೇಷದ ತಂಡವನ್ನು ಕಟ್ಟಿಕೊಂಡಿದ್ದಾರೆ.

ಬುಧವಾರ ಶಾರದ ವಿಸರ್ಜನೆ ವೇಳೆ ಮೆರವಣಿಗೆಯಲ್ಲಿ ಈ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿದ್ದು, ಮುಂದುವರಿದ ಭಾಗವಾಗಿ ನಿನ್ನೆ ಮೆಲ್ಕಾರ್ ಜಂಕ್ಷನ್ ಕಲ್ಲಿ ಒಂದು ತಂಡದ ಸದಸ್ಯರು ಬ್ಯಾನರ್ ತೆರವು ಮಾಡುತ್ತಿದ್ದ ವೇಳೆ ಇನ್ನೊಂದು ತಂಡ ಸ್ಥಳಕ್ಕೆ ಬಂದು ಹಲ್ಲೆ ನಡೆಸಿ,ಚೂರಿಯಿಂದ ಇರಿದು ಪರಾರಿಯಾಗಿದೆ ಎನ್ನಲಾಗಿದೆ.

ಬಂಟ್ವಾಳ ನಗರ ಪೊಲೀಸರು ಸ್ಥಳಕ್ಕೆ ಬೇಟಿ ನೀಡಿ ತನಿಖೆ ನಡೆಸುತ್ತಿದ್ದಾರೆ.