ಡೈಲಿ ವಾರ್ತೆ: 27/OCT/2023

ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ: ಆರಗ ಆಗ್ರಹ

ಶಿವಮೊಗ್ಗ: ರಾಜ್ಯದಲ್ಲಿ ಹುಲಿ ಉಗುರು ಧರಿಸಿದ ವ್ಯಕ್ತಿಗಳ ವಿರುದ್ಧ ಅರಣ್ಯಾಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದು, ಹಲವರನ್ನು ವಶಕ್ಕೆ ಪಡೆಯುತ್ತಿದ್ದಾರೆ. ಈ ಪ್ರಕರಣ ಗಮನಿಸಿದರೆ ಅರಣ್ಯಾಧಿಕಾರಿಗಳು ಪ್ರಚಾರದ ಗೀಳಿಗೆ ಬಿದ್ದಂತಿದೆ.
ವನ್ಯಜೀವಿ ಕಾಯ್ದೆ ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಿ ಇಲ್ಲವೇ, ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ ಎಂದು ಮಾಜಿ ಗೃಹ ಸಚಿವ ಆರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ.

ಜಿಲ್ಲೆಯ ತೀರ್ಥಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೆಲವರು ಇದನ್ನೇ ದಾಳವಾಗಿರಿಸಿಕೊಂಡು ಪೆಂಡೆಂಟ್ ಧರಿಸಿದ ಅನೇಕರ ಫೋಟೋಗಳನ್ನ ಜಾಲತಾಣಗಳಲ್ಲಿ ಹರಿಬಿಡುತ್ತಿದ್ದಾರೆ. ಫೋಟೋ ಕಂಡು ಬಂದ ಎಲ್ಲರ ಮೇಲೂ ಕ್ರಮ ಕೈಗೊಳ್ಳಲಾಗುತ್ತಿದೆ. 1972ರ ವನ್ಯಜೀವಿ ಕಾಯ್ದೆ ಹಿಂದಿನ ಪ್ರಕರಣ ಕೈಬಿಡಿ, ಇಲ್ಲವೇ ಟಿಪ್ಪು ಸುಲ್ತಾನ್ ಹುಲಿ ಕೊಲ್ಲುತ್ತಿರುವ ಫೋಟೋ ಹಾಕಿಕೊಂಡಿರುವವರ ವಿರುದ್ಧವೂ ಕ್ರಮ ಕೈಗೊಳ್ಳಿ, ಇಲ್ಲದಿದ್ದರೆ ಇದು ಸಹ ಹುಲಿ ಕೊಲ್ಲಲ್ಲು ಬೇರೆಯವರಿಗೆ ಪ್ರೇರಣೆ ನೀಡಬಹುದು ಎಂದು ಒತ್ತಾಯಿಸಿದ್ದಾರೆ.

ಜೊತೆಗೆ ಮಸೀದಿಗಳಲ್ಲಿ ಮುಸ್ಲಿಂ ಮೌಲ್ವಿಗಳು ನವಿಲುಗರಿ ಇಟ್ಟುಕೊಂಡಿರುತ್ತಾರೆ. ನವಿಲುಗರಿಯಿಂದ ತಲೆಯ ಮೇಲೆ, ಭುಜದ ಮೇಲೆ ಹೊಡೆಯುತ್ತಾರೆ. ನವಿಲು ರಾಷ್ಟ್ರೀಯ ಪಕ್ಷಿ ಆಗಿರುವುದರಿಂದ ಅವರ ಮೇಲೆಯೂ ಕ್ರಮ ಕೈಗೊಳ್ಳಬೇಕಲ್ಲವೇ ಎಂದು ಪ್ರಶ್ನಿಸಿದ್ದಾರೆ.

ಮಲೆನಾಡು ಹಾಗೂ ಕರಾವಳಿ ಭಾಗದ ಮನೆಗಳಲ್ಲಿ ನೂರಾರು ವರ್ಷಗಳಿಂದ ಕಾಡೆಮ್ಮೆ, ಜಿಂಕೆ ಕೊಂಬುಗಳನ್ನು ಮನೆಯಲ್ಲಿ ಅಲಂಕಾರಿಕ ವಸ್ತುಗಳಾಗಿ ಬಳಸುತ್ತಿದ್ದಾರೆ. ಈ ಹಿಂದೆ ಹುಲಿ ಉಗುರು ರೀತಿಯ ವಸ್ತುಗಳನ್ನು ಮಾರಾಟ ಮಾಡಲು ಹಳ್ಳಿಗಳ ಕಡೆ ಬರುತ್ತಿದ್ದರು. ಅದನ್ನು‌ ಜನರು ಕೊಂಡುಕೊಳ್ಳುತ್ತಿದ್ದರು. ಮಕ್ಕಳ ಕೊರಳಿಗೆ ಕಟ್ಟಿದ್ದರೆ ಧೈರ್ಯದ ಪ್ರತೀಕ ಎಂದು‌ ಭಾವಿಸಿದ್ದರು. ಇತ್ತೀಚೆಗೆ ಶ್ರೀಮಂತರು ಅದನ್ನು ಚಿನ್ನದ ಸರಕ್ಕೆ ಪೆಂಡೆಂಟ್ ರೂಪದಲ್ಲಿ ಮಾಡಿಸಿಕೊಂಡು ಹಾಕಿಕೊಳ್ಳುತ್ತಿದ್ದಾರೆ. ಆದ್ರೆ ಅರಣ್ಯಾಧಿಕಾರಿಗಳು ಹಿಂದೆ-ಮುಂದೆ ನೋಡದೇ ಕ್ರಮ ಜರುಗಿಸುತ್ತಿದ್ದಾರೆ ಎಂದು ಅಸಮಾಧಾನ ಹೊರಹಾಕಿದ್ದಾರೆ.

ನಾನು ವನ್ಯಜೀವಿ ಕಾಯ್ದೆ ವಿರೋಧಿಯಲ್ಲ, ವನ್ಯಜೀವಿ ಕಾಯ್ದೆ ಜಾರಿಗೆ ಬರುವ ಮೊದಲು ಸಂಗ್ರಹ ಮಾಡಿ ಇಟ್ಟುಕೊಂಡಿರುವವರನ್ನು ಬಿಡುಗಡೆ ಮಾಡಬೇಕು. ಎಲ್ಲರನ್ನು ಹಿಡಿದು ಜೈಲಿಗೆ ಹಾಕಿದರೆ, ಈ ರಾಜ್ಯದ ಜೈಲುಗಳು ಸಾಕಾಗುವುದಿಲ್ಲ. ರಾಜ್ಯ ಸರ್ಕಾರ ಈ ಬಗ್ಗೆ ಮಧ್ಯ ಪ್ರವೇಶ ಮಾಡಬೇಕು. ಮುಖ್ಯಮಂತ್ರಿ, ಅರಣ್ಯ ಸಚಿವರು ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಕುಳಿತು ಚರ್ಚೆ ಮಾಡಿ ನಂತರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.