ಡೈಲಿ ವಾರ್ತೆ: 28/OCT/2023

ಕೋಟ ಠಾಣೆಯ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ದ.ಸಂ.ಸ ಸೇರಿ ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಎಸ್.ಪಿ. ಕಚೇರಿ ಮುಂದೆ ಪ್ರತಿಭಟನೆ, ಉಸ್ತುವಾರಿಯವರ ಕಾರಿಗೆ ಮುತ್ತಿಗೆ ಎಚ್ಚರಿಕೆ

ಕೋಟ: ಇತ್ತೀಚೆಗೆ ಕೋಟ ಪೊಲೀಸ್ ಠಾಣೆಯಲ್ಲಿ ಕೂಲಿ ಕಾರ್ಮಿಕರಾದ ಆಶಾ ಮತ್ತು ಸುಜಾತ ಅವರ ಮೇಲೆ ನಡೆದಿದೆ ಎನ್ನಲಾದ ಪೊಲೀಸ್ ದೌರ್ಜನ್ಯವನ್ನು ಖಂಡಿಸಿ ಹಾಗೂ ದೌರ್ಜನ್ಯ ಎಸಗಿದವರಲ್ಲಿ ಪ್ರಮುಖ ಭಾಗಿ ಎನ್ನಲಾದ ಕ್ರೈಂ ವಿಭಾಗದ ಪಿ.ಎಸ್.ಐ. ಸುಧಾ ಪ್ರಭು ಅವರನ್ನು ಸೇವೆಯಿಂದ ವಜಾಗೊಳಿಸುವಂತೆ ಆಗ್ರಹಿಸಿ ಅ.28ರಂದು ಕೋಟ ಪೊಲೀಸ್ ಠಾಣೆ ಎದುರು ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಸಂಘಟನೆ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು.

ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಪ್ರಮುಖ ನ್ಯಾಯವಾದಿ ಟಿ.ಮಂಜುನಾಥ ಗಿಳಿಯಾರ್ ಮಾತನಾಡಿ, ಕೋಟ ಠಾಣೆಯಲ್ಲಿ ನಡೆದ ಮಹಿಳಾ ದೌರ್ಜನ್ಯ ಅತ್ಯಂತ ಹೇಯ ಕೃತ್ಯವಾಗಿದೆ. ಅಮಾಯಕ ಮಹಿಳೆಯರ ಮೇಲಿನ ಈ ಪೊಲೀಸ್ ದೌರ್ಜನ್ಯವನ್ನು ಸಹಿಸಲು ಅಸಾಧ್ಯ. ಸಂತ್ರಸ್ತರಿಗೆ ನ್ಯಾಯ ಸಿಗದಿದ್ದರೆ ಮುಂದೆ ಎಸ್.ಪಿ. ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಗೆ ಬಂದಾಗ ಅವರ ಕಾರಿಗೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಸಾಕ್ಷಿ ಕೇಳಿದ ಎಸ್.ಪಿ. ನಡೆಗೆ ಖಂಡನೆ:-
ಪ್ರಕರಣವನ್ನು ಜಿಲ್ಲಾ ಎಸ್.ಪಿ. ಗಂಭೀರವಾಗಿ ಪರಿಗಣಸಿಲ್ಲ ಇಲಾಖೆಯ ಸಿಬಂದಿಯನ್ನು ರಕ್ಷಿಸುವ ಸಲುವಾಗಿ ಹೋರಾಟಗಾರರಿಗೆ ನೋಟೀಸು ನೀಡುವ, ಬೆದರಿಸುವ ತಂತ್ರವನ್ನು ಮಾಡಿದ್ದಾರೆ. ಮುಂದಿನ ದಿನದಲ್ಲಿ ಎಸ್.ಪಿ.ಯವರ ವಿರುದ್ಧವೇ ನಮ್ಮ ಹೋರಾಟ ತೀವ್ರಗೊಳ್ಳಲಿದೆ ಎಂದು ಸಂಘಟನೆಯ ಪ್ರಮುಖರಾದ ಸುಂದರ ಮಾಸ್ತರ್ ತಿಳಿಸಿದರು.

ಮುಖ್ಯ ಮಂತ್ರಿ, ಗೃಹ ಸಚಿವರ ಗಮನಕ್ಕೆ:
ಜಿಲ್ಲೆಗೆ ಆಗಮಿಸುವ ಮುಖ್ಯ ಮಂತ್ರಿಗಳು ಹಾಗೂ ಗೃಹಸಚಿವರ ಗಮನಕ್ಕೆ ಈ ಪ್ರಕರಣವನ್ನು ತಂದು ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಕೆ ನೀಡಲಾಯಿತು.
ಈ ಸಂದರ್ಭ ಪ್ರತಿಭಟನಾ ಸ್ಥಳದಲ್ಲಿ ಬಿಗು ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಯಿತು. ಸ್ಥಳಕ್ಕಾಗಮಿಸಿದ ಬ್ರಹ್ಮಾವರ ವೃತ್ತನಿರೀಕ್ಷಕ ದಿವಾಕರ್ ಅವರಿಗೆ ಪ್ರತಿಭಟನಾಕಾರರು ಮನವಿ ನೀಡಿದರು. ಬ್ರಹ್ಮಾವರ ಪಿ.ಎಸ್.ಐ. ರಾಜಶೇಖರ್ ವಂಡಳ್ಳಿ ಮೊದಲಾದವರಿದ್ದರು.

ಸಿ.ಐ.ಟಿ.ಯು. ಉಡುಪಿ ಜಿಲ್ಲೆ, ಜನವಾದಿ ಮಹಿಳಾ ಸಂಘಟನೆ ಉಡುಪಿ ಮತ್ತು ಪ್ರಗತಿಪರ ಸಂಘಟನೆಗಳು ಪ್ರತಿಭಟನೆಗೆ ಬೆಂಬಲ ನೀಡಿದವು.
ಸಂಘಟನೆಯ ಪ್ರಮುಖರಾದ ವಾಸುದೇವ ಮುದೂರು, ರಾಜು ಬೆಟ್ಟಿನಮನೆ, ನಾಗರಾಜ್ ಬೈಂದೂರು, ಶ್ರೀನಿವಾಸ ವಡ್ಡರ್ಸೆ, ಪರಮೇಶ್ವರ ಉಪ್ಪೂರು, ಶ್ಯಾಮಸುಂದರ್ ತೆಕ್ಕಟ್ಟೆ, ಐತ ಕಾರ್ಕಡ, ವಸಂತಿ ಶಿವಾನಂದ, ಜನವಾದಿ ಮಹಿಳಾ ಸಂಘಟನೆಯ ಶೀಲವತಿ, ಪ್ರಗತಿಪರ ಚಿಂತಕ ಬಾಲಕೃಷ್ಣ ಶೆಟ್ಟಿ, ಅಜಿತ್ ಶೆಟ್ಟಿ ಯಾಳಕ್ಲು, ಸಿ.ಐ.ಟಿ.ಯು ಸಂಘಟನೆಯ ಚಂದ್ರಶೇಖರ್, ಸುರೇಶ್ ಅಂಪಾರು, ಗಣೇಶ್ ನೆಲ್ಲಿಬೆಟ್ಟು ಮೊದಲಾದವರಿದ್ದರು.