ಡೈಲಿ ವಾರ್ತೆ: 29/OCT/2023

ಕೇರಳ ಬಾಂಬ್ ಬ್ಲಾಸ್ಟ್: ಬಾಂಬ್ ಇಟ್ಟಿದ್ದು ನಾನೇ ಅಂತಾ ಪೊಲೀಸರಿಗೆ ವ್ಯಕ್ತಿ ಶರಣು!

ತಿರುವನಂತಪುರಂ: ಕೇರಳದ ಕಳಮಶ್ಶೇರಿ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಓರ್ವ ವ್ಯಕ್ತಿ ಸ್ವತಃ ತಾನೇ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

ತ್ರಿಶ್ಶೂರ್ ಜಿಲ್ಲೆಯ ಕೊಡಕ್ಕರ ಠಾಣೆಯ ಪೊಲೀಸರ ಮುಂದೆ ಕೊಚ್ಚಿ ನಿವಾಸಿ ಶರಣಾಗಿದ್ದಾನೆ. ಬ್ಲಾಸ್ಟ್ ಬಳಿಕ ಇಂದು (ಭಾನುವಾರ) ಮಧ್ಯಾಹ್ನ 1.30ರ ವೇಳೆಗೆ ಪೊಲೀಸ್ ಠಾಣೆಗೆ ಬಂದಿದ್ದ ವ್ಯಕ್ತಿ, ಬಾಂಬ್ ಇಟ್ಟಿದ್ದು ನಾನೇ ಎಂದು ಬಾಯ್ಬಿಟ್ಟಿದ್ದಾನೆ. ಸದ್ಯ ವ್ಯಕ್ತಿಯನ್ನು ವಶಕ್ಕೆ ಪಡೆದಿರುವ ಪೊಲೀಸರು ಆತ ನೀಡಿರುವ ಹೇಳಿಕೆಯನ್ನು ಆಧರಿಸಿ ಅಜ್ಞಾತ ಸ್ಥಳದಲ್ಲಿಟ್ಟು ತನಿಖೆ ನಡೆಸುತ್ತಿದ್ದಾರೆ.

ಇಂದು ಬೆಳಗ್ಗೆ ಪ್ರಾರ್ಥನಾ ಮಂದಿರದಲ್ಲಿ ಸುಮಾರು 2,500 ಮಂದಿ ಜಮಾಯಿಸಿದ್ದರು. ಈ ವೇಳೆ ಭಾರೀ ಸ್ಫೋಟವಾಗಿದೆ. ಈ ಸ್ಫೋಟಕ್ಕೂ ಮುನ್ನ ನೀಲಿ ಬಣ್ಣದ ಕಾರೊಂದು ಹೊರಟಿರುವುದು ಸಿಸಿಟಿವಿ ಪರಿಶೀಲನೆಯ ವೇಳೆ ಬಯಲಾಗಿದೆ. ಕನ್ವೆನ್ಷನ್ ಸೆಂಟರ್ ನಿಂದ ವೇಗವಾಗಿ ಕಾರು ಹೊರಟಿತ್ತು. ಸದ್ಯ ಕಾರು ಸಾಗುತ್ತಿರುವ ಸಿಸಿಟಿವಿ ದೃಶ್ಯಾವಳಿ ಸಂಗ್ರಹಿಸಿದ ಪೊಲೀಸರು, ಕಾರು ಪತ್ತೆಹಚ್ಚಲು ಮುಂದಾಗಿದ್ದಾರೆ.

ಪ್ರಕರಣ ಸಂಬಂಧ ಇದೀಗ ಕೇರಳದ 14 ಜಿಲ್ಲೆಗಳಲ್ಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿದೆ. ಅಂತೆಯೇ ಕಣ್ಣೂರು ರೈಲ್ವೇ ನಿಲ್ದಾಣದಲ್ಲಿ ಪರಿಶೋಧನೆ ನಡೆಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಓರ್ವನನ್ನು ವಶಕ್ಕೆ ಪಡೆದಿದ್ದಾರೆ. ಗುಜರಾತಿ ಭಾಷೆ ಮಾತನಾಡುತ್ತಿದ್ದ ಈತನ ಬ್ಯಾಗ್ ನಲ್ಲಿ ಕೆಲವು ಪ್ರಮುಖ ಸ್ಥಳಗಳ ಫೋಟೋ ಇತ್ತು. ಈ ಚಿತ್ರಗಳ ಬಗ್ಗೆ ಕೇಳಿದಾಗ ಸೂಕ್ತ ಉತ್ತರ ನೀಡಲಿಲ್ಲ. ಈ ಹಿನ್ನೆಯಲ್ಲಿ ಆತನನ್ನು ಕೂಡ ಕೇರಳ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.

ನಡೆದಿದ್ದೇನು..?; ಕೇರಳದ ಕಳಮಶ್ಶೇರಿಯಲ್ಲಿರುವ ಕನ್ವೆನ್ಸನ್ ಸೆಂಟರ್‍ನಲ್ಲಿ ಸರಣಿ ಸ್ಫೋಟ ಸಂಭವಿಸಿದೆ. ಯಹೋವನ ಸಾಕ್ಷಿಗಳ ಪ್ರಾರ್ಥನಾ ಸಭೆ ನಡೆಯುತ್ತಿರುವ ಹೊತ್ತಲ್ಲೇ ಈ ಸ್ಫೋಟ ನಡೆದಿದ್ದು ಇಬ್ಬರು ಸಾವನ್ನಪ್ಪಿದ್ದು, 10 ಮಂದಿ ಗಂಭೀರ ಗಾಯಗೊಂಡಿದ್ದು, 30 ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ. ಪ್ರಾಥಮಿಕ ತನಿಖೆಯಲ್ಲಿ ಸುಧಾರಿತ ಸ್ಫೋಟಕ ಸಾಧನ ಐಇಡಿ ಬಳಸಿ ಕೃತ್ಯ ನಡೆಸಿರುವುದು ಗೊತ್ತಾಗಿದೆ. ಕೆಲವೊಂದು ಅವಶೇಷಗಳು ದೊರಕಿದ್ದು, ಪರಿಶೀಲನೆ ನಡೆಸುತ್ತಿದ್ದೇವೆ. ಇದರ ಹಿಂದಿರುವವರನ್ನು ಪತ್ತೆ ಹಚ್ಚಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಡಿಜಿಪಿ ಡಾ.ಶೇಖ್ ದರ್ವೇಶ್ ಸಾಹೇಬ್ ಹೇಳಿದ್ದಾರೆ.

ಈ ಘಟನೆ ಗಂಭೀರವಾದುದು. ಹಾಗಾಗಿ ಎಲ್ಲ ಆಯಮಾಗಳಲ್ಲೂ ತನಿಖೆ ನಡೆಸಲಿದ್ದೇವೆ. ತನಿಖೆಗೆ ಹೊಸ ತಂಡವೊಂದನ್ನು ರಚಿಸಲಾಗಿದೆ. ಇದೇ ವೇಳೆ ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ, ದ್ವೇಷದ ಸಂದೇಶಗಳನ್ನು ಪೋಸ್ಟ್ ಮಾಡಿದ್ದು ಕಂಡು ಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಯಾರು ಕೂಡ ಯಾವುದೇ ವದಂತಿಗಳನ್ನು ನಂಬಬೇಡಿ. ಜನರು ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕಾರ ನೀಡಬೇಕು. ಈ ಆದೇಶ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಮುಖ್ಯಸ್ಥರು ಎಚ್ಚರಿಕೆ ನೀಡಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ, ವಿಶೇಷ ತನಿಖಾ ತಂಡ ಹಾಗೂ ಎನ್‍ಐಎ ಅಧಿಕಾರಿಗಳ ತಂಡ ಕೂಡ ಘಟನಾ ಸ್ಥಳಕ್ಕೆ ಭೇಟಿ ನೀಡಿದೆ ಎಂದು ವರದಿಯಾಗಿದೆ. ಸ್ಫೋಟದ ಹಿನ್ನೆಲೆಯಲ್ಲಿ ಸರ್ಕಾರಿ ಆರೋಗ್ಯ ಸೇವಾ ವೃತ್ತಿಪರರು ಕರ್ತವ್ಯಕ್ಕೆ ಹಾಜರಾಗಬೇಕು ಎಂದು ಕೇರಳ ರಾಜ್ಯ ಆರೋಗ್ಯ ಸಚಿವೆ ವೀಣಾ ಜಾರ್ಜ್ ಸೂಚಿಸಿದ್ದಾರೆ.