ಡೈಲಿ ವಾರ್ತೆ: 30/OCT/2023

ನೇತ್ರಾವತಿ ಸೇತುವೆ ಮೇಲೆ ಕೆಟ್ಟು ನಿಂತ ಬಸ್: ಟ್ರಾಫಿಕ್ ಸಮಸ್ಯೆಯಿಂದ ಪರದಾಡಿದ ಪ್ರಯಾಣಿಕರು – ಬಸ್ ಮಾಲಕ ಚಾಲಕರ ವಿರುದ್ಧ ಆಕ್ರೋಶ

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆ ಮೇಲೆ ಕಾಂಟ್ರಾಕ್ಟ್ ಕ್ಯಾರೇಜ್ ಬಸ್ ಒಂದು ಕೆಟ್ಟು ನಿಂತ ಪರಿಣಾಮ ಸುಮಾರು ಎರಡು ತಾಸುಗಳ ಕಾಲ ಟ್ರಾಪಿಕ್ ಸಮಸ್ಯೆ ಉಂಟಾಗಿದ್ದು, ಪ್ರಯಾಣಿಕರು ಪರದಾಡಿದ ಘಟನೆ ಭಾನುವಾರ ನಡೆಯಿತು.

ಮಂಗಳೂರು ಕಡೆಯಿಂದ ಉಪ್ಪಿನಂಗಡಿಗೆ ಸಂಚರಿಸುವ ಅರಫಾ ಬಸ್ ನ ವೀಲ್ ಜಾಮ್ ಆಗಿಸೇತುವೆ ಮಧ್ಯ ಭಾಗದಲ್ಲಿ ಬಸ್ ಕೆಟ್ಟು ನಿಂತ ಪರಿಣಾಮ ಎರಡು ಕಡೆಯಿಂದ ಬರುವ ಇತರ ವಾಹನಗಳ ಸಂಚಾರಕ್ಕೆ ಅಡಚಣೆ ಉಂಟಾಯಿತು.

ಬಳಿಕ ಸ್ಥಳಕ್ಕೆ ಆಗಮಿಸಿದ ಬಂಟ್ವಾಳ ಸಂಚಾರಿ ಠಾಣಾಧಿಕಾರಿ ಸುತೇಶ್, ಎ.ಎಸ್.ಐ.ಗಳಾದ ವಿಜಯ್, ಸುರೇಶ್ ಪಡಾರ್, ಸಿಬ್ಬಂದಿಗಳಾದ ರಮೇಶ್, ಅಭಿಷೇಕ್ ಸಮಸ್ಯೆ ನಿವಾರಿಸಲು ಹರಸಾಹಸ ಪಟ್ಟರು. ಪೋಲೀಸರು ಕ್ರೇನ್ ತರಿಸಿ ಬಸ್ ನ್ನು ಒಂದು ಬದಿಗೆ ಎಳೆದ ತಂದು ಸುಗಮ ಸಂಚಾರಕ್ಕೆ ಅವಕಾಶ ಮಾಡಿದರು.

*ಬಸ್ ಮಾಲಕ ಚಾಲಕರ ವಿರುದ್ಧ ಆಕ್ರೋಶ*

ಕೆಟ್ಟು ನಿಂತ ಬಸ್ಸನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವ ಬಗ್ಗೆ ಅರಫಾ ಬಸ್ಸಿನ ಚಾಲಕ ಹಾಗೂ ಮಾಲಕರು ಯಾವುದೇ ಕ್ರಮ ಕೈಗೊಳ್ಳದೇ ಇರುವ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು ಇವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ. ಹಾಗೂ ಪೋಲೀಸರ ಸಮಯೋಚಿತ ಕ್ರಮದ ಬಗ್ಗೆ ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.