ಡೈಲಿ ವಾರ್ತೆ: 31/OCT/2023

ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಗೆ ಮುತ್ತಿಗೆ, ಸರಕಾರಿ ಕರ್ತವ್ಯಕ್ಕೆ ಅಡ್ಡಿ, ಎಸ್ಡಿಪಿಐ ಬೆಂಬಲಿತ 8 ಮಂದಿ ಸದಸ್ಯರ ವಿರುದ್ಧ ದೂರು .

ಬಂಟ್ವಾಳ : ಗ್ರಾಮ ಪಂಚಾಯತ್ ಕಚೇರಿಗೆ ಮುತ್ತಿಗೆ ಹಾಕಿ ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ
ಎಂಟು ಮಂದಿ ಗ್ರಾಮ ಪಂಚಾಯತ್ ಸದಸ್ಯರ ವಿರುದ್ಧ ದೂರು ದಾಖಲಾದ ಘಟನೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ನಡೆದಿದೆ.

ಬಂಟ್ವಾಳ ತಾಲೂಕಿನ ಸಜಿಪ ಮುನ್ನೂರು ಗ್ರಾಮ ಪಂಚಾಯತ್ ನಲ್ಲಿ ಈ ಘಟನೆ ನಡೆದಿದ್ದು, ಇಲ್ಲಿನ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅವರು ಅದೇ ಗ್ರಾಮ ಪಂಚಾಯತ್ ಸದಸ್ಯರುಗಳಾದ ಅಬುಬಕ್ಕರ್ ಸಿದ್ದೀಕ್, ಜಮಾಲುದ್ದೀನ್, ಫಾತಿಮಾ ಸೌನ್, ಪೌಝಿಯಾ, ಸಬೀನಾ, ರಝಿಯಾ, ಸಾಜಿದ್, ವಹಿದಾ ಬಾನು ಎಂಬವರ ವಿರುದ್ಧ ದೂರು ನೀಡಿದ್ದಾರೆ.

ಸಜಿಪ ಮುನ್ನೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲಕ್ಷ್ಮಣ್ ಅವರು ಅಧಿಕಾರ ದುರುಪಯೋಗ ಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಇಲ್ಲಿನ ಎಸ್.ಡಿ.ಪಿ.ಐ ಬೆಂಬಲಿತ ಎಂಟು ಮಂದಿ ಸದಸ್ಯರುಗಳು ಗ್ರಾಮ ಪಂಚಾಯತ್ ಗೆ ಯಾವುದೇ ಮುನ್ನೆಚ್ಚರಿಕೆ ನೀಡದೆ ಸೋಮವಾರ ಮುತ್ತಿಗೆ ಹಾಕಿದ್ದರು.

ಅಲ್ಲದೆ ಪಂಚಾಯತ್ ಸಿಬ್ಬಂದಿಗಳಾದ ಮೀನಾಕ್ಷಿ, ಮಹಮ್ಮದ್ ಹಾರಿಶ್, ನಳಿನಿ, ಸುಮನಾ ರವರನ್ನು ಕಚೇರಿಯೊಳಗೆ ಹೋಗದಂತೆ ತಡೆ ಹಿಡಿದು ಸರಕಾರಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದರು.
ಜೊತೆಗೆ ಕಚೇರಿಯ ಬೀಗದ ಕೀಯನ್ನು ಬಲವಂತವಾಗಿ
ಕಸಿದುಕೊಂಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.