ಡೈಲಿವಾರ್ತೆ:12/ಮಾರ್ಚ್/2026

ಬ್ರಹ್ಮಾವರ| ವಾರೆಂಟ್ ಜಾರಿ ವೇಳೆ ಪೊಲೀಸರ ಮೇಲೆಯೇ ಹಲ್ಲೆ!: ವಾಕಿಟಾಕಿ ಜಖಂ, ಕತ್ತಿಯಿಂದ ಕೊಲ್ಲುವ ಬೆದರಿಕೆ – ಆರೋಪಿ ವಶಕ್ಕೆ

ಬ್ರಹ್ಮಾವರ: ಬಾಕಿ ಇರುವ ವಾರಂಟ್ ಜಾರಿಗೊಳಿಸಲು ತೆರಳಿದ ಪೊಲೀಸರ ಮೇಲೆ ಆರೋಪಿಯೊಬ್ಬರು ಹಲ್ಲೆ ನಡೆಸಿ, ಇಲಾಖೆಯ ವಾಕಿಟಾಕಿಯನ್ನು ಜಖಂಗೊಳಿಸಿ ಜೀವ ಬೆದರಿಕೆ ಹಾಕಿದ ಘಟನೆ ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಲಕ್ಷ್ಮೀನಗರದಲ್ಲಿ ನಡೆದಿದೆ.

ಮಲ್ಪೆ ಪೊಲೀಸ್ ಠಾಣೆಯ ಹೆಡ್ ಕಾನ್ಸಟೇಬಲ್ ಸುರೇಶ್ ಕುಮಾರ್ ಅವರು ಮಾನ್ಯ ಮಲ್ಪೆ ವೃತ್ತ ನಿರೀಕ್ಷಕರ ಆದೇಶದಂತೆ ಬಾಕಿ ಇರುವ ವಾರಂಟ್ ಜಾರಿಗಾಗಿ ಮಾರ್ಚ್ 11ರಂದು ಬೆಳಿಗ್ಗೆ ಸುಮಾರು 6.50ರ ಸುಮಾರಿಗೆ ಠಾಣೆಯ ಹೆಡ್ ಕಾನ್ಸಟೇಬಲ್ ಆದರ್ಶ ಅವರೊಂದಿಗೆ ವಾರಂಟ್ ಅಸಾಮಿಯಾದ ಕಿಶೋರ್ ಎಂಬಾತನ ಮನೆಗೆ ತೆರಳಿದ್ದರು.

ಬ್ರಹ್ಮಾವರ ಠಾಣಾ ವ್ಯಾಪ್ತಿಯ ಉಪ್ಪೂರು ಗ್ರಾಮದ ಲಕ್ಷ್ಮೀನಗರದಲ್ಲಿರುವ ಮನೆ ನಂ. 8-179ರ ಬಳಿ ತಲುಪಿ ಮನೆಯ ಅಂಗಳದಲ್ಲಿ ನಿಂತು ಆರೋಪಿಯನ್ನು ಕರೆದಾಗ, ಆತನು ಪೊಲೀಸರನ್ನು ಕಂಡು ಮನೆಯಿಂದ ಓಡಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಈ ವೇಳೆ ಸುರೇಶ್ ಕುಮಾರ್ ಹಾಗೂ ಆದರ್ಶ ಅವರು ಆರೋಪಿಯನ್ನು ಹಿಡಿದಿದ್ದಾರೆ.
ಆದರೆ ತಪ್ಪಿಸಿಕೊಳ್ಳಲು ಯತ್ನಿಸಿದ ಆರೋಪಿ ಕಿಶೋರ್ ಪಿರ್ಯಾದಿದಾರರಾದ ಸುರೇಶ್ ಕುಮಾರ್ ಅವರ ಮುಖಕ್ಕೆ ಹಲ್ಲೆ ಮಾಡಿ, ಮುಂಗೈಯಿಂದ ಎಡಭಾಗದ ಪಕ್ಕೆಲುಬಿಗೆ ತಿವಿದಿದ್ದಾನೆ. ಅಲ್ಲದೆ ಅವರೊಂದಿಗೆ ಇದ್ದ ಆದರ್ಶ ಅವರ ಮುಖಕ್ಕೆ ಕೈಯಿಂದ ಹೊಡೆದು, ಎಡಕೈ ಹಾಗೂ ಹೊಟ್ಟೆಯ ಬಲಭಾಗಕ್ಕೆ ಪರಚಿ, ಎಡಭುಜಕ್ಕೆ ಮುಷ್ಠಿಯಿಂದ ಗುದ್ದಿದಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದರ ಜೊತೆಗೆ ಪಿರ್ಯಾದಿದಾರರ ಬಳಿ ಇದ್ದ ಇಲಾಖೆಯ ವಾಕಿಟಾಕಿಯನ್ನು ಕಿತ್ತು ನೆಲಕ್ಕೆ ಎಸೆದು ಜಖಂಗೊಳಿಸಿದ್ದಾನೆ. ಬಳಿಕ ತನ್ನ ತಾಯಿಯನ್ನು ಕರೆದು ಮನೆಯಿಂದ ಕತ್ತಿ ತಂದುಕೊಡು, ಪೊಲೀಸರನ್ನು ಇಲ್ಲಿಯೇ ಕಡಿದು ಹಾಕುತ್ತೇನೆ ಎಂದು ಜೀವ ಬೆದರಿಕೆ ಹಾಕಿದಿರುವುದಾಗಿ ತಿಳಿದುಬಂದಿದೆ.

ನಂತರ ಪೊಲೀಸರು ಆರೋಪಿಯನ್ನು ವಾರೆಂಟ್ ಮೇರೆಗೆ ವಶಕ್ಕೆ ಪಡೆದು ಮಲ್ಪೆ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಹಲ್ಲೆಯಿಂದ ಗಾಯಗೊಂಡ ಸುರೇಶ್ ಕುಮಾರ್ ಮತ್ತು ಆದರ್ಶ ಅವರು ಉಡುಪಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

ಈ ಕುರಿತು ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 48/2026ರಡಿ ಭಾರತೀಯ ನ್ಯಾಯ ಸಂಹಿತೆ (BNS) ಕಲಂ 132, 121(1), 352, 351(2) ಹಾಗೂ Prevention of Destruction & Loss of Property Act 1981ರ ಕಲಂ 2(a) ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.