ಡೈಲಿ ವಾರ್ತೆ: 31/OCT/2023
ಮಾಣಿ : ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನ 113 ನೇ ನೂತನ ಮಾಣಿ ಶಾಖೆಯ ಉದ್ಘಾಟನೆ – ಜಿಲ್ಲೆಯಲ್ಲಿ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೇ ಇಲ್ಲ. ಎಂ.ಎನ್. ರಾಜೇಂದ್ರಕುಮಾರ್
ಬಂಟ್ವಾಳ : ಹೆಚ್ಚಿನ ರಾಷ್ಟ್ರೀಕೃತ ಬ್ಯಾಂಕ್‌ಗಳು ದ.ಕ.ಜಿಲ್ಲೆಯಲ್ಲೇ ಹುಟ್ಟಿದ್ದರೂ ಈಗ ಅದು ವಿಲೀನವಾಗಿ ಇಲ್ಲಿನ ಭಾಷೆ ಗೊತ್ತಿಲ್ಲದವರೇ ಅಲ್ಲಿ ಇರುವುದರಿಂದ ಸಹಕಾರಿ ಸಂಘಗಳು ಜನಮಣ್ಣನೆ ಗಳಿಸಿ ಬೆಳವಣಿಗೆ ಹೊಂದಿದೆ. ಅವಿಭಜಿತ ದ.ಕ.ಜಿಲ್ಲೆಯು ಸಾಲ ಮರುಪಾವತಿಯಲ್ಲಿ ದೇಶದಲ್ಲೇ ಮಾದರಿಯಾಗಿದ್ದು, ಜಿಲ್ಲೆಯಲ್ಲಿ ಆರ್ಥಿಕ ಸೌಲಭ್ಯ ಸಿಕ್ಕಿಲ್ಲ ಎಂದು ರೈತರು ಆತ್ಮಹತ್ಯೆ ಮಾಡಿಕೊಂಡ ಉದಾಹರಣೆಗಳೇ ಇಲ್ಲ ಎಂದು ದ.ಕ.ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಡಾ| ಎಂ.ಎನ್.ರಾಜೇಂದ್ರಕುಮಾರ್ ಹೇಳಿದರು.
ಅವರು ಮಾಣಿಯ ಶ್ರೀ ಲಕ್ಷ್ಮೀ ನಾರಾಯಣ ಕಾಂಪ್ಲೆಕ್ಸ್ ನಲ್ಲಿ ಬ್ಯಾಂಕಿನ 113ನೇ ನೂತನ ಮಾಣಿ ಶಾಖೆಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಮಾಣಿ ಶಾಖೆಗೆ ಇಲ್ಲಿನ ಸಹಕಾರಿಗಳು 22 ಕೋಟಿ ರೂ.ಠೇವಣಿ ಹಾಗೂ 1300 ಕ್ಕೂ ಅಧಿಕ ಖಾತೆಗಳನ್ನು ನೀಡುವ ಮೂಲಕ ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ, ಮಹಿಳೆಯರಿಗೆ ಸ್ವಾವಲಂಬಿ ಜೀವನದ ಜೊತೆಗೆ ಬದಲಾವಣೆಗೆ ಕಾರಣವಾದ ಕೀರ್ತಿಯೂ ಸಹಕಾರಿ ಕ್ಷೇತ್ರಕ್ಕೆ ಸಲ್ಲುತ್ತದೆ, ಮಹಿಳೆಯರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ನೀಡುವ ಯೋಜನೆ ಮುಂದಿನ ದಿನಗಳಲ್ಲಿ ಜಾರಿಗೆ ಬರಲಿದೆ ಎಂದರು.
ನವೋದಯ ಸ್ವಸಹಾಯ ಸಂಘಗಳನ್ನು ಉದ್ಘಾಟಿಸಿದ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಡಾ| ರಾಜೇಂದ್ರ ಕುಮಾರ್ ಅವರ ಕಾರ್ಯಕ್ರಮಗಳು ಅದ್ದೂರಿಯಾಗಿ ನಡೆಯುತ್ತಿದ್ದು, ಬೆಳೆಯುತ್ತಿರುವ ಮಾಣಿಗೆ ಎಸ್‌ಸಿಡಿಸಿಸಿ ಬ್ಯಾಂಕಿನ ಶಾಖೆಯ ಶುಭಾರಂಭ ದೊಡ್ಡ ಕೊಡುಗೆಯಾಗಿದೆ. ಕ್ಲಪ್ತ ಸಮಯದ ಸಾಲ ಮರು ಪಾವತಿಯಿಂದ ಸಹಕಾರಿ ಸಂಘಗಳು ಬೆಳೆಯುತ್ತದೆ ಎಂದರು.
ಗಣಕೀಕರಣವನ್ನು ಉದ್ಘಾಟಿಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, 13,500 ಕೋಟಿ ರೂ.ಗಳ ವ್ಯವಹಾರದ ಮೂಲಕ ಎಸ್‌ಸಿಡಿಸಿಸಿ ಬ್ಯಾಂಕಿನ ಸಾಧನೆಯಿಂದ ನಾವೆಲ್ಲರೂ ಹೆಮ್ಮೆ ಪಡಬೇಕಿದೆ. ಕಪ್ಪು ಚುಕ್ಕೆ ಇಲ್ಲದ ಬ್ಯಾಂಕಿನ ಸೇವೆ ಹಾಗೂ ರಾಜೇಂದ್ರಕುಮಾರ್ ಸಾಧನೆಗೆ ಇ.ಡಿ. ಅಧಿಕಾರಿಗಳೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎಂದರು.
ಸಾಲ ಪತ್ರಗಳನ್ನು ಸದಸ್ಯರಿಗೆ ವಿತರಿಸಿದ ಮಾಣಿ ಗ್ರಾ.ಪಂ ಅಧ್ಯಕ್ಷ ಇಬ್ರಾಹಿಂ ಕೆ ಮಾಣಿ ಮಾತನಾಡಿ ಮಾಣಿ ಶಾಖೆಯು ಉತ್ತಮ ವ್ಯವಹಾರ ನಡೆಸುವ ಮೂಲಕ ಜಿಲ್ಲೆಗೆ ಮಾದರಿ ಆಗಲಿದೆ ಎಂದ ಅವರು ಸಹಕಾರಿ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿದ ಪರಿಸರದ ಹಿರಿಯರನ್ನು ನೆನಪಿಕೊಂಡರು.
ನೇರಳಕಟ್ಟೆ ಸಹಕಾರಿ ವ್ಯವಸಾಯಿಕ ಸಂಘದ ಅಧ್ಯಕ್ಷ ಪುಷ್ಪರಾಜ್ ಚೌಟ ಭದ್ರತಾಕೋಶ ಉದ್ಘಾಟಿಸಿ ಮಾತನಾಡಿದರು.
ಶಾಖಾ ಕಟ್ಟಡದ ಮಾಲಕ ಎಂ.ನಾರಾಯಣ ಪೈ, ಬ್ಯಾಂಕಿನ ಉಪಾಧ್ಯಕ್ಷ ವಿನಯಕುಮಾರ್ ಸೂರಿಂಜೆ, ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಗೋಪಾಲಕೃಷ್ಣ ಭಟ್ ಕೆ, ನಿರ್ದೇಶಕರುಗಳಾದ ಎಸ್.ಬಿ.ಜಯರಾಮ್ ರೈ, ಮೋನಪ್ಪ ಶೆಟ್ಟಿ ಎಕ್ಕಾರು, ಸದಾಶಿವ ಉಳ್ಳಾಲ್, ಕೆ.ಹರಿಶ್ಚಂದ್ರ, ಸ್ಕ್ಯಾಡ್ಸ್ ಅಧ್ಯಕ್ಷ ರವೀಂದ್ರ ಕಂಬಳಿ ಉಪಸ್ಥಿತರಿದ್ದರು.
ಇದೇ ವೇಳೆ ಸಹಕಾರಿಗಳ ಪರವಾಗಿ ಡಾ| ಎಂ.ಎನ್. ರಾಜೇಂದ್ರಕುಮಾರ್, ನೇರಳಕಟ್ಟೆ ಬ್ಯಾಂಕಿನ ಅಧ್ಯಕ್ಷ ಪುಷ್ಪರಾಜ್ ಚೌಟ, ಶಾಖಾ ಕಟ್ಟಡದ ಮಾಲಕ ಎಂ.ನಾರಾಯಣ ಪೈ, ಸಹಕಾರಿಗಳ ಕ್ರೀಡಾಕೂಟದ ಉಸ್ತುವಾರಿ ದಯಾನಂದ ರೈ, ಶಾಖಾ ವ್ಯವಸ್ಥಾಪಕಿ ವತ್ಸಲಾ ಅವರನ್ನು ಸನ್ಮಾನಿಸಲಾಯಿತು.
ಠೇವಣಿ ಪತ್ರ, ಲಾಕರ್ ವ್ಯವಸ್ಥೆ ಕೀ ಹಸ್ತಾಂತರ, ಲಕ್ಕಿ ಡ್ರಾ ಮೂಲಕ ಠೇವಣಿದಾರರು, ಎಫ್‌ಡಿ ಖಾತೆದಾರರನ್ನು ಗೌರವಿಸಲಾಯಿತು.
ಬ್ಯಾಂಕಿನ ನಿರ್ದೇಶಕ ಟಿ.ಜಿ.ರಾಜಾರಾಮ್ ಭಟ್ ಸ್ವಾಗತಿಸಿ, ನಿರ್ದೇಶಕ ಶಶಿಕುಮಾರ್ ರೈ ಬಿ. ವಂದಿಸಿದರು. ಆರ್‌ಜೆ ಪ್ರಸನ್ನ ಕಾರ್ಯಕ್ರಮ ನಿರೂಪಿಸಿದರು.