ಡೈಲಿ ವಾರ್ತೆ: 01/NOV/2023
ಉಡುಪಿ: ಕುಂಜಿಬೆಟ್ಟು ಮನೆ ಕಳ್ಳತನದ ಕುಖ್ಯಾತ ಕಳ್ಳನ ಬಂಧನ – ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳು ವಶಕ್ಕೆ
ಉಡುಪಿ: ಕುಂಜಿಬೆಟ್ಟು ಲಾಲಾಲಜಪತ್ ರಾಯ್ ಮಾರ್ಗದ ಮನೆಯೊಂದರಲ್ಲಿ ಕೆಲವು ದಿನಗಳ ಹಿಂದೆ ನಡೆದ ಕಳವು ಪ್ರಕರಣವನ್ನು ಬೇಧಿಸಿದ ಉಡುಪಿ ಪೊಲೀಸರು, ಈ ಸಂಬಂಧ ಓರ್ವ ಆರೋಪಿಯನ್ನು ಬಂಧಿಸಿ, ಲಕ್ಷಾಂತರ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಈ ಕುರಿತು ಉಡುಪಿ ನಗರ ಠಾಣೆಯಲ್ಲಿ ಬುಧವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಹೆಚ್ಚುವರಿ ಎಸ್ಪಿ ಎಸ್.ಟಿ. ಸಿದ್ಧಲಿಂಗಪ್ಪ ಮಾಹಿತಿ ನೀಡಿದರು.
ಬೆಂಗಳೂರು ಉತ್ತರಹಳ್ಳಿಯ ಭುವನೇಶ್ವರಿ ನಗರದ ನಿವಾಸಿ ಮಂಜುನಾಥ ಯಾನೆ ಕಲ್ಕೆರೆ ಮಂಜ(43) ಬಂಧಿಕ ಆರೋಪಿ.
ಬಂಧಿತನಿಂದ 31,55,930ರೂ. ಮೌಲ್ಯದ 530ಗ್ರಾಂ ಚಿನ್ನಾಭರಣ ಹಾಗೂ 15,12,000ರೂ. ಮೌಲ್ಯದ 16.800ಗ್ರಾಂ ಬೆಳ್ಳಿಯ ಆಭರಣಗಳನ್ನು ಮತ್ತು ಕಳವು ಮಾಡಲು ಬಳಸಿದ 2.50ಲಕ್ಷ ರೂ.ಮೌಲ್ಯದ ಕಾರು, ನಕಲಿ ನಂಬರ್ ಪ್ಲೇಟ್‌ಗಳು ಮತ್ತು ಕಬ್ಬಿಣದ ರಾಡ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.
ಅ. 8ರಂದು ರಾತ್ರಿ ಕುಂಜಿಬೆಟ್ಟುವಿನ ಅಮ್ಮುಂಜೆ ವಿಟ್ಠಲದಾಸ್ ನಾಯಕ್ ಎಂಬವರ ಮನೆಗೆ ನುಗ್ಗಿದ್ದ ಕಳ್ಳರು, ಒಟ್ಟು 73,06,800ರೂ. ಮೌಲ್ಯದ 1,882 ಗ್ರಾಂ ತೂಕದ ಚಿನ್ನಾಭರಣ ಹಾಗೂ 7450 ಗ್ರಾಂ ಬೆಳ್ಳಿಯ ಸೊತ್ತುಗಳನ್ನು ಕಳವು ಮಾಡಿಕೊಂಡು ಹೋಗಿದ್ದರು. ಈ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪ, ಉಡುಪಿ ನಗರ ಠಾಣಾ ಎಸ್ಸೈ ಪುನೀತ್ ಕುಮಾರ್ ಬಿ.ಇ. ಹಾಗೂ ಈರಣ್ಣ ಶಿರಗುಂಪಿ ನೇತೃತ್ವದಲ್ಲಿ ವಿಶೇಷ ತಂಡವನ್ನು ರಚಿಸಿದ್ದು, ಅದರಂತೆ ತಂಡವು ಅ.31ರಂದು ಆರೋಪಿ ಮಂಜುನಾಥನನ್ನು ಉಡುಪಿ ಉದ್ಯಾವರ ಸಮೀಪದ ಬಲಾಯಿ ಪಾದೆ ಬಳಿ ಕಾರು ಸಹಿತ ವಶಕ್ಕೆ ಪಡೆದುಕೊಂಡಿದ್ದಾರೆ. ಉಳಿದ ಸೊತ್ತುಗಳನ್ನು ಇನ್ನೂ ವಶಪಡಿಸಿಕೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದಾರೆ.
ಆರೋಪಿಯು ಬ್ರಹ್ಮಾವರ, ತರಿಕೆರೆ, ಅರಸಿಕೇರೆ ಮತ್ತು ಬಾಣಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಗಳಲ್ಲಿಯೂ ಕೂಡಾ ಭಾಗಿಯಾಗಿದ್ದಾನೆ. ಈತನ ವಿರುದ್ಧ ಈಗಾಗಲೇ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ ಹಾಗೂ ಚಿಕ್ಕಬಳ್ಳಾಪುರ ಜಿಲ್ಲೆಗಳ ವಿವಿಧ ಪೊಲೀಸ್ ಠಾಣೆಗಳಲ್ಲಿ 60ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ ಎಂದು ಹೆಚ್ಟುವರಿ ಎಸ್ಪಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಉಡುಪಿ ಡಿವೈಎಸ್ಪಿ ದಿನಕರ ಪಿ.ಕೆ., ಉಡುಪಿ ನಗರ ಠಾಣಾ ಪೊಲೀಸ್ ನಿರೀಕ್ಷಕ ಮಂಜಪ್ಪಡಿ.ಆರ್. ಉಪಸ್ಥಿತರಿದ್ದರು.