ಡೈಲಿ ವಾರ್ತೆ: 02/NOV/2023
ವಂಡ್ಸೆ ವ್ಯಕ್ತಿ ಸಾಲಬಾಧೆಯಿಂದ ಆತ್ಮಹತ್ಯೆಗೆ ಶರಣು
ಕುಂದಾಪುರ: ಇತ್ತೀಚಿಗೆ ರಸ್ತೆ ಅಪಘಾತದಲ್ಲಿ ಕಾಲಿಗೆ ಪೆಟ್ಟಾಗಿ, ದೈನಂದಿನ ಕೆಲಸಕಾರ್ಯಗಳನ್ನು ನಿರ್ವಹಿಸಲಾಗದೆ, ಈ ಕಾರಣದಿಂದ, ಗೃಹನಿರ್ಮಾಣಕ್ಕಾಗಿ ಮಾಡಿದ್ದ ಸಾಲವನ್ನೂ ತೀರಿಸಲಾಗದೆ ಹತಾಶೆಗೊಂಡ ವ್ಯಕ್ತಿಯೋವರು ಆತ್ಮಹತ್ಯೆ ಮಾಡಿಕೊಂಡ ಘಟನೆ ಕುಂದಾಪುರ ಸಮೀಪದ ವಂಡ್ಸೆಯಲ್ಲಿ ನಡೆದಿದೆ.
ಆತ್ಮಹತ್ಯೆಗೆ ಶರಣಾದ ದುರ್ದೈವಿ ವಂಡ್ಸೆಯ ಸತೀಷ (43) ಎಂದು ತಿಳಿದು ಬಂದಿದೆ.
ಇವರು ಸಮೀಪದ ಬಾಳಿಕೇರಿ ಎಂಬಲ್ಲಿ ನೂತನ ಮನೆಕಟ್ಟಿಸಿದ್ದರು. ಇದಕ್ಕಾಗಿ ಖಾಸಗಿ ಸಂಸ್ಥೆಗಳಲ್ಲಿ ಸಾಲ ಮಾಡಿದ್ದರು. ಈ ನಡುವೆ ಅಪಘಾತಾಕ್ಕೊಳಗಾಗಿ ಕಾಲಿಗೆ ಪೆಟ್ಟಾದ್ದರಿಂದ ಕೆಲಸಕ್ಕೂ ಹೋಗದ ಪರಿಸ್ಥಿತಿ ಬಂದಿತು. ತನಗಾದ ಅಪಘಾತ, ಮನೆಯ ವಿಷಮ ಪರಿಸ್ಥಿತಿ, ಬೆಳೆಯುವ ಸಾಲದ ಕಂತು ಇವೆಲ್ಲವುಗಳಿಂದ ಕಂಗೆಟ್ಟು ಸತೀಷ ವಿಷ ಪದಾರ್ಥ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ.