ಡೈಲಿ ವಾರ್ತೆ: 13/NOV/2023

ಬೆಂಗಳೂರು: ಮೀಟರ್‌ ಬಡ್ಡಿ ದಂಧೆಗೆ ಸಿಸಿಬಿ ದಾಳಿ – ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣ ವಶಕ್ಕೆ

ಬೆಂಗಳೂರು: ರಾಜಧಾನಿಯಲ್ಲಿ ಮೀಟರ್‌ ಬಡ್ಡಿ ದಂಧೆ ನಡೆಸುತ್ತಿದ್ದ ನಾಲ್ಕು ಕಡೆಗಳಲ್ಲಿ ಸಿಸಿಬಿ (CCB) ದಾಳಿ ನಡೆಸಿ ಲಕ್ಷಾಂತರ ರೂ. ನಗದು ಹಾಗೂ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದೆ.

ಐದು ವರ್ಷಗಳ ನಂತರ ಮೀಟರ್ ಬಡ್ಡಿ ದಂಧೆ ನಡೆಸುತಿದ್ದವರನ್ನು ಗುರಿಯಾಗಿಸಿ ಸಿಸಿಬಿ ದಾಳಿ ನಡೆಸಿದೆ. ಸಿಸಿಬಿ ಆರ್ಥಿಕ ಅಪರಾಧ ವಿಭಾಗದ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ನಡೆಸಿದ್ದಾರೆ. ಬಡ್ಡಿ ದಂಧೆ ನಡೆಸುತ್ತಿದ್ದವರ ವಿರುದ್ಧ ಮನಿ ಲಾಂಡರಿಂಗ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ದಾಳಿ ವೇಳೆ 23 ಲಕ್ಷ ರೂ. ನಗದು, 127 ಗ್ರಾಂ ಚಿನ್ನಾಭರಣ, 10 ಕೆಜಿ ಬೆಳ್ಳಿ, 109 ಚೆಕ್‌ಗಳು, 50 ಅನ್ ಡಿಮಾಂಡ್ ಪ್ರಾಮಿಸರಿ ನೋಟ್, 42 ಖಾಲಿ ಬಾಂಡ್ ಪೇಪರ್, 85 ಶುದ್ಧ ಕ್ರಯ ಪತ್ರಗಳು, 35 ಸಾಲ ನಮೂದಿಸಿದ ದಾಖಲಾತಿ, 11 ಇ-ಸ್ಪಾಂಪ್ ಪೇಪರ್‌ಗಳು, 45 ಪಾಕೆಟ್ ಪುಸ್ತಕ, 15 ಅಗ್ರಿಮೆಂಟ್ ಪ್ರತಿಗಳು, 6 ರೋಲೆಕ್ಸ್ ವಾಚುಗಳನ್ನು ವಶಕ್ಕೆ ಪಡೆಯಲಾಗಿದೆ.

ಒಟ್ಟಾರೆ 40 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ಸಿಸಿಬಿ ಅಧಿಕಾರಿಗಳು ವಶಕ್ಕೆ ಪಡೆದಿದ್ದಾರೆ. ಬಡ್ಡಿಗೆ ಎಂದು ಹಣ ಕೊಟ್ಟು ಸಾರ್ವಜನಿಕರನ್ನು ಹಿಂಸಿಸಿ ಮೀಟರ್ ಲೆಕ್ಕದಲ್ಲಿ ಹಣ ವಸೂಲಿ ಮಾಡಲಾಗುತ್ತಿದೆ ಎಂಬ ಆರೋಪದಡಿ ವಶಕ್ಕೆ ಪಡೆಯಲಾಗಿದೆ.