ಡೈಲಿ ವಾರ್ತೆ: 15/NOV/2023
ನೇಜಾರು ಪ್ರಕರಣ; ಆರೋಪಿ ನ.28 ರ ವರೆಗೆ ಪೊಲೀಸ್ ಕಸ್ಟಡಿಗೆ
ಉಡುಪಿ : ಕೆಮ್ಮಣ್ಣು ನೇಜಾರಿನ ಹಂಪನಕಟ್ಟೆ ಸಮೀಪದ ತೃಪ್ತಿ ಲೇ ಔಟ್‌ನ ಮನೆಯ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿ ಬಂಧನಕ್ಕೊಳಗಾಗಿರುವ ಆರೋಪಿ ಪ್ರವೀಣ್ ಚೌಗಲೆಯನ್ನು ನ.28 ರ ವರೆಗೆ ಪೊಲೀಸ್ ಕಸ್ಟಡಿಗೆ ಬುಧವಾರ (ನ. 15) ನ್ಯಾಯಾಲಯ ಒಪ್ಪಿಸಿದೆ.
ಉಡುಪಿಯ ಹೆಚ್ಚುವರಿ ಸಿವಿಲ್ ನ್ಯಾಯಾಧೀಶ ಹಾಗೂ ಪ್ರಥಮ ದರ್ಜೆ ನ್ಯಾಯಿಕ ದಂಡಾಲಯದ ನ್ಯಾಯಾಧೀಶ ಶ್ಯಾಂಪ್ರಕಾಶ್ ಅವರು 14 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಒಪ್ಪಿಸಿ ಆದೇಶ ನೀಡಿದ್ದಾರೆ. ನ್ಯಾಯಾಲಯಕ್ಕೆ ಹಾಜರುಪಡಿಸುವ ವೇಳೆ ಉಡುಪಿ ನ್ಯಾಯಾಲಯ ಸೇರಿ ಸೂಕ್ಷ್ಮ ಸ್ಥಳಗಳಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಚೌಗಲೆ ಯನ್ನು ಉಡುಪಿ ಪೊಲೀಸರು ಬೆಳಗಾವಿಯಿಂದ ವಶಕ್ಕೆ ಪಡೆದು ಉಡುಪಿಗೆ ಕರೆತಂದಿದ್ದರು. ಉಡುಪಿ ಮತ್ತು ಬೆಳಗಾವಿ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಮಂಗಳವಾರ ಬೆಳಗಾವಿ ಜಿಲ್ಲೆಯ ರಾಯಬಾಗ ತಾಲೂಕಿನ ಕುಡಚಿಯಲ್ಲಿ ಬಂಧಿಸಲಾಗಿತ್ತು.
ಮಲ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕೆಮ್ಮಣ್ಣು ನೇಜಾರಿನ ಹಂಪನಕಟ್ಟೆ ಸಮೀಪದ ತೃಪ್ತಿ ಲೇ ಔಟ್‌ನ ಮನೆಯ ತಾಯಿ ಮತ್ತು ಮೂವರು ಮಕ್ಕಳನ್ನು ಚೂರಿಯಿಂದ ಇರಿದು ಬರ್ಬರವಾಗಿ ಹತ್ಯೆಗೈಯಲಾಗಿತ್ತು.
ಸೌದಿ ಅರೇಬಿಯಾದಲ್ಲಿ ಉದ್ಯೋಗದಲ್ಲಿರುವ ನೂರ್ ಮೊಹಮ್ಮದ್ ಅವರ ಪತ್ನಿ ಹಸೀನಾ (48), ಪುತ್ರಿಯರಾದ ಅಫ್ನಾನ್ (23), ಅಯ್ನಾಝ್ (21), ಪುತ್ರ ಅಸೀಮ್ (14) ಹತ್ಯೆಗೀಡಾಗಿದ್ದರು. ನೂರ್ ಮೊಹಮ್ಮದ್ ಅವರ ತಾಯಿ ಹಾಜಿರಾಬಿ (70) ಮೇಲೆಯೂ ದಾಳಿ ನಡೆಸಲಾಗಿತ್ತು.