ಡೈಲಿ ವಾರ್ತೆ: 15/NOV/2023
ಸಿಬ್ಬಂದಿಗಳ ನೇಮಕಾತಿಗೆ ಒತ್ತಾಯಿಸಿ ಕೆನರಾ ಬ್ಯಾಂಕ್ ನೌಕರರ ಸಂಘದಿಂದ ಒತ್ತಾಯ
ಉಡುಪಿ: ಕೆನರಾ ಬ್ಯಾಂಕಿನಲ್ಲಿ ಗ್ರಾಹಕರಿಗೆ ಅತ್ಯುತ್ಕೃಷ್ಟ ಗ್ರಾಹಕ ಸೇವೆಯನ್ನು ಒದಗಿಸಲು ಅಗತ್ಯ ಪ್ರಮಾಣದ ಸಿಬ್ಬಂದಿಗಳ ನೇಮಕಾತಿ ಮಾಡಬೇಕು ಮತ್ತು ಖಾಯಂ ಹುದ್ದೆಗಳ ಹೊರಗುತ್ತಿಗೆ ನೀಡುವುದನ್ನು ನಿಲ್ಲಿಸಬೇಕು ಹಾಗೂ ಇತರ ಬೇಡಿಕೆಗಳ ಈಡೇರಿಕೆಗಾಗಿ ಒತ್ತಾಯಿಸಿ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಸದಸ್ಯರು ಇಂದು ಮಣಿಪಾಲದ ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮಹಾ ಪ್ರಬಂಧಕ ಎಂ.ಜಿ.ಪಂಡಿತ್ ಅವರಿಗೆ ತಮ್ಮ ಬೇಡಿಕೆಗಳ ತ್ವರಿತ ಈಡೇರಿಕೆಗೆ ಒತ್ತಾಯಿಸಿ ಮನವಿ ಪತ್ರವನ್ನು ಸಲ್ಲಿಸಿದರು.
ಮನವಿ ಪತ್ರ ಸಲ್ಲಿಸಿದ ನಂತರ ಕೆನರಾ ಬ್ಯಾಂಕ್ ಎಂಪ್ಲಾಯೀಸ್ ಯೂನಿಯನ್ ಹಾಗೂ ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಸದಸ್ಯರು ಕೆನರಾ ಬ್ಯಾಂಕ್ ವೃತ್ತ ಕಛೇರಿಯ ಮುಂಭಾಗ ಪ್ರತಿಭಟನಾ ಮತ ಪ್ರದರ್ಶನ ನಡೆಸಿ ತಮ್ಮ ನ್ಯಾಯಯುತವಾದ ಬೇಡಿಕೆಗಳ ಈಡೇರಿಕೆಗೆ ಕೆನರಾ ಬ್ಯಾಂಕ್ ಶ್ರೀಘ್ರದಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಮತಪ್ರದರ್ಶನದಲ್ಲಿ ನೌಕರ ಸಂಘದ ಮುಖಂಡರಾದ ಕೆ.ರಾಘವೇಂದ್ರ ನಾಯರಿ, ಪ್ರೇಮನಾಥ್ ಪೂಜಾರಿ, ಕ.ರಮೇಶ್, ದಿವಾಕರ ಶೆಟ್ಟಿ, ಶೈಲೇಶ, ಉಡುಪಿ ಜಿಲ್ಲಾ ಬ್ಯಾಂಕ್ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ನಾಗೇಶ್ ನಾಯಕ್, ಸೂರಜ್ ಶೆಟ್ಟಿ, ಮನೋಜ್ ಕುಮಾರ್, ನಾಗೇಶ್ ಶೇರಿಗಾರ್, ನಿಕಿತಾ, ಶಾರ್ಲೆಟ್ ಸಲ್ಡಾನಾ, ಉಮಾ, ಮನೋಜ್, ಅನ್ನಾ ಮರಿಯಾ, ಸೌಮ್ಯ
ಮುಂತಾದವರು ಭಾಗವಹಿಸಿದ್ದರು.