ಡೈಲಿ ವಾರ್ತೆ: 17/NOV/2023

ಉಪನ್ಯಾಸಕನ ವಿರುದ್ಧ ಕಿರುಕುಳದ ಆರೋಪ- ವಿದ್ಯಾರ್ಥಿ ಆತ್ಮಹತ್ಯೆ

ಚಿಕ್ಕಬಳ್ಳಾಪುರ: ಉಪನ್ಯಾಸಕನ ವಿರುದ್ಧ ವಿದ್ಯಾರ್ಥಿಯೊಬ್ಬ ಸೆಲ್ಫಿ ವೀಡಿಯೋ ಮೂಲಕ ಗಂಭೀರ ಆರೋಪ ಮಾಡಿ ಆತ್ಮಹತ್ಯೆಗೆ ಶರಣಾದ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಮಲ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ.

ಮಲ್ಲಹಳ್ಳಿ ಗ್ರಾಮದ ಲಲಿತಮ್ಮ ಹಾಗೂ ದೇವರಾಜು ದಂಪತಿಯ ಪುತ್ರ ಗಜೇಂದ್ರ ಆತ್ಮಹತ್ಯೆ ಮಾಡಿಕೊಂಡಿರುವಾತ.

ಈತ ಚಿಕ್ಕಬಳ್ಳಾಪುರ ನಗರದ ಖಾಸಗಿ ಕಾಲೇಜಿನಲ್ಲಿ ಡಿಪ್ಲೊಮಾ ಮೆಕ್ಯಾನಿಕಲ್ ವಿಭಾಗದಲ್ಲಿ ವ್ಯಾಸಂಗ ಮಾಡುತ್ತಿದ್ದಾನೆ. ಇದೀಗ ಈತ ಉಪನ್ಯಾಸಕ ಮುಂಜುನಾಥ್ ವಿರುದ್ಧ ಕಿರುಕುಳದ ಆರೋಪ ಮಾಡಿ ಸೂಸೈಡ್ ಮಾಡಿಕೊಂಡಿದ್ದಾನೆ.

ಆರೋಪವೇನು?: ಗಜೇಂದ್ರನಿಗೆ ಉಪನ್ಯಾಸಕ ಮಂಜುನಾಥ್ ವಿನಾಕಾರಣ ವೈಯಕ್ತಿಕವಾಗಿ ಟಾರ್ಗೆಟ್ ಮಾಡಿ ಕಿರುಕುಳ ಕೊಡುತ್ತಿದ್ದರು. ಅಲ್ಲದೇ ಪದೇ ಪದೇ ಹಲ್ಲೆ ಮಾಡುವುದು, ಅಸೈನ್ ಮೆಂಟ್ ಬುಕ್ ಹರಿದು ಹಾಕಿ ಉಳಿದ ವಿದ್ಯಾರ್ಥಿಗಳ ಎದುರೇ ಮರ್ಯಾದೆ ತೆಗೆದಿರುವುದಾಗಿ ಗಜೇಂದ್ರ ಸೆಲ್ಫಿ ವಿಡಿಯೋದಲ್ಲಿ ಆರೋಪಿಸಿದ್ದಾನೆ. ನನ್ನ ಸಾವಿಗೆ ಮಂಜುನಾಥ್ ಕಾರಣ. ನನ್ನ ಮರ್ಯಾದೆ ಹೋಯ್ತು. ಅದೇ ಕಾರಣಕ್ಕೆ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಅಂತ ವೀಡಿಯೋದಲ್ಲಿ ಗಜೇಂದ್ರ ತಿಳಿಸಿದ್ದಾನೆ.
ಬುಧವಾರ ರಾತ್ರಿ ಒಂದು ವೀಡಿಯೋ ಹಾಗೂ ಗುರುವಾರ ಬೆಳಗ್ಗೆ ಮತ್ತೊಂದು ವೀಡಿಯೋ ಸೇರಿದಂತೆ ಎರಡು ವೀಡಿಯೋ ಮಾಡಿ ಗಜೇಂದ್ರ ಮನೆಯ ಮುಂಭಾಗದ ಹಳೆಯ ಮನೆಯೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ. ಇತ್ತ ಮಗ ಆತ್ಮಹತ್ಯೆ ಯಾಕೆ ಮಾಡಿಕೊಂಡ ಎಂಬುದನ್ನು ಅರಿಯದ ಪೋಷಕರು, ಗಜೇಂದ್ರನನ್ನು ಮಣ್ಣು ಮಾಡಿ ಸುಮ್ಮನಾಗಿದ್ದಾರೆ. ಆದರೆ ಇಂದು ಬೆಳಗ್ಗೆ ಗಜೇಂದ್ರ ಮೊಬೈಲ್ ಪರಿಶೀಲನೆ ಮಾಡಿದಾಗ ಸೆಲ್ಫಿ ವೀಡಿಯೋ ಪತ್ತೆಯಾಗಿದ್ದು ಸಾವಿನ ಸತ್ಯ ಬಯಲಾಗಿದೆ.

ವಿಚಾರ ತಿಳಿಯುತ್ತಿದ್ದಂತೆಯೇ ಗಜೇಂದ್ರ ಪೊಷಕರು ಹಾಗೂ ಸಂಬಂಧಿಕರು ಪಾಲಿಟೆಕ್ನಿಕ್ ಕಾಲೇಜಿಗೆ ಮುತ್ತಿಗೆ ಹಾಕಿ ಪ್ರಾಂಶುಪಾಲರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಈ ವೇಳೆ ನಂದಿಗಿರಿಧಾಮ ಪೊಲೀಸರು ಹಾಗೂ ಪ್ರತಿಭಟನಕಾರರ ವಾಗ್ವಾದ ನಡೆದಿದೆ.