ಡೈಲಿ ವಾರ್ತೆ: 17/NOV/2023
ಕಾನೂನು ವಿರುದ್ಧ ಯಾವುದೇ ಸಂಘಟನೆ ನಡೆದುಕೊಂಡರೂ ಕ್ರಮ ಗ್ಯಾರಂಟಿ: ಪರಮೇಶ್ವರ್
ಬೆಂಗಳೂರು: ಯಾವುದೇ ವ್ಯಕ್ತಿಗಳು, ಸಂಘಟನೆಗಳು ಕಾನೂನು ವಿರುದ್ಧ ನಡೆದುಕೊಂಡರೆ ಕ್ರಮ ಅನಿವಾರ್ಯ ಎಂದು ಗೃಹ ಸಚಿವ ಪರಮೇಶ್ವರ್ ಎಚ್ಚರಿಕೆ ಕೊಟ್ಟಿದ್ದಾರೆ.
ಬಜರಂಗದಳದ ಕಾರ್ಯಕರ್ತರಿಗೆ ಗಡಿಪಾರಿಗೆ ನೋಟಿಸ್ ನೀಡಿರುವ ವಿಚಾರವಾಗಿ ಪೇಜಾವರ ಶ್ರೀ, ಬಿಜೆಪಿ ವಿರೋಧ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಕಾನೂನು ಹೊರತುಪಡಿಸಿ ಪೊಲೀಸ್ ಇಲಾಖೆ ಯಾವ ಕೆಲಸ ಮಾಡಲ್ಲ. ಬಜರಂಗದಳ ಆಗಲಿ ಯಾವುದೇ ಸಂಘ ಸಂಸ್ಥೆಗಳು ಆಗಲಿ, ವೈಯಕ್ತಿಕವಾಗಿ ಕಾನೂನು ಪ್ರಕಾರ ಏನೇ ಮಾಡಿದರೂ ನಮ್ಮ ಸರ್ಕಾರ ಅವರ ಜೊತೆ ಇರುತ್ತೆ. ಕಾನೂನಿನ ವಿರುದ್ಧವಾಗಿ ಕೆಲಸ ಮಾಡಿದರೆ ಏನು ಮಾಡಬೇಕು? ಪೊಲೀಸ್ ಇಲಾಖೆ ಇರೋದು ಕಾನೂನು ಹಾಗೂ ಶಾಂತಿ ಕಾಪಾಡಲು. ಆ ದೃಷ್ಟಿಯಲ್ಲಿ ಪೊಲೀಸ್ ಇಲಾಖೆ ಕ್ರಮಗಳನ್ನು ತೆಗೆದುಕೊಳ್ಳುತ್ತದೆ ಎಂದು ಗಡಿಪಾರು ನೋಟಿಸ್ ಅನ್ನು ಸಮರ್ಥನೆ ಮಾಡಿಕೊಂಡರು.
ಯಾರನ್ನೋ ಹತ್ತಿಕ್ಕಬೇಕು ಅಥವಾ ರಾಜಕೀಯ ದುರುದ್ದೇಶಕ್ಕೆ ಕ್ರಮ ತೆಗೆದುಕೊಳ್ಳಬೇಕು ಅಂತ ಯಾವ ಪೊಲೀಸರು ಮಾಡಲ್ಲ. ನಮ್ಮ ಸರ್ಕಾರ ಜನ ಸಮುದಾಯಕ್ಕೆ, ರಾಜ್ಯದ ಜನರಿಗೆ ಶಾಂತಿ ಕಾಪಾಡುತ್ತೇವೆ ಅಂತ ಮಾತು ಕೊಟ್ಟಿದ್ದೇವೆ. ನಮ್ಮ ಪ್ರಣಾಳಿಕೆಯಲ್ಲಿ ಸರ್ವ ಜನಾಂಗದ ಶಾಂತಿಯ ತೋಟ ಅಂತ ಹಾಕಿದ್ದೇವೆ. ಸಂಘಟನೆಗಳು ಶಾಂತಿಯುತವಾಗಿ ಸಹಕಾರ ಮಾಡಿದರೆ ನಾವು ಅವರ ಜೊತೆ ಇರುತ್ತೇವೆ. ಇಲ್ಲದೆ ಹೋದರೆ ಕಾನೂನು ಕ್ರಮ ತೆಗೆದುಕೊಳ್ಳುತ್ತೇವೆ ಎಂದು ವಾರ್ನಿಂಗ್ ಕೊಟ್ಟರು.