ಡೈಲಿ ವಾರ್ತೆ: 23/NOV/2023

ಬೈಕ್ ಕಳವು ಮಾಡಿಕೊಂಡು ಹೋಗುವ ವೇಳೆ ಅಪಘಾತ: ಬೈಕ್ ಬಿಟ್ಟು ಪರಾರಿಯಾದ ಕಳ್ಳ.!

ಬಂಟ್ವಾಳ : ಬೈಕ್ ಕಳವು ಮಾಡಿಕೊಂಡು ಹೋಗುವ ವೇಳೆ ಅಪಘಾತ ಸಂಭವಿಸಿ ಸ್ಥಳದಲ್ಲಿಯೇ ಬೈಕ್ ಬಿಟ್ಟು ಪರಾರಿಯಾದ ಘಟನೆ ಗುರುವಾರ ಸಂಜೆ ವೇಳೆ ತುಂಬೆ ಸಮೀಪದ ಬ್ರಹ್ಮರಕೋಟ್ಲುವಿನಲ್ಲಿ ನಡೆದಿದೆ.

ತುಂಬೆ ಶಾಲಾ ಮಕ್ಕಳ ವಾಹನಕ್ಕೆ ಬೈಕ್ ಡಿಕ್ಕಿ ಹೊಡೆದು ಬೈಕ್ ಸವಾರ ಪರಾರಿಯಾಗಿದ್ದಾನೆ.


ವಾಮದಪದವು ಗ್ರಾಮದ ಕೊರಗಟ್ಟೆ ನಿವಾಸಿ ಬೇಬಿ ಗೌಡ ಎಂಬವರು
ವಾಮದಪದವಿನಿಂದ ಬಿ.ಸಿ.ರೋಡು ವರೆಗೆ ಬೈಕ್ ನಲ್ಲಿ ಬಂದಿದ್ದು ಬಿ.ಸಿ.ರೋಡಿನ ಪ್ಲೈ ಓವರ್ ನ ಅಡಿ ಭಾಗದಲ್ಲಿ ಬೈಕ್ ನಿಲ್ಲಿಸಿ, ಮಂಗಳೂರಿಗೆ ಬಸ್ ನಲ್ಲಿ ತೆರಳಿದ್ದರು.

ಮಂಗಳೂರಿನಲ್ಲಿ ತನ್ನ ಕೆಲಸ ಮುಗಿಸಿ ಬಸ್ ನಲ್ಲಿ ವಾಪಸು ಬಿ.ಸಿ.ರೋಡ್ ಗೆ ಬರುತ್ತಿದ್ದ ವೇಳೆ ಮೋಬೈಲ್ ಕರೆ ಬಂದಿದ್ದು, ಬೈಕ್ ಬ್ರಹ್ಮರಕೂಟ್ಲು ಎಂಬಲ್ಲಿ ಅಪಘಾತ ಸಂಭವಿಸಿದೆ ಎಂಬ ವಿಚಾರ ತಿಳಿದಿದೆ.

ಬಳಿಕ ಸ್ಥಳಕ್ಕೆ ಭೇಟಿ ನೀಡಿ ನೋಡಿದಾಗ ವಿಚಾರ ಸ್ಪಷ್ಟವಾಗಿದೆ. ಯಾರೋ ಅಂದಾಜು 45 ವರ್ಷದ ವ್ಯಕ್ತಿ ಬೈಕ್ ಕಳವು ಮಾಡಿಕೊಂಡು ಹೋಗುತ್ತಿದ್ದ ವೇಳೆ ಈ ಅಪಘಾತ ಸಂಭವಿಸಿ, ಆತನಿಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಅಲ್ಲಿಂದ ಕಾಲ್ಕಿತ್ತಿದ್ದಾನೆ ಎಂದು ಅಲ್ಲಿ ಸೇರಿದ ಜನ ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಬಿ.ಸಿ. ರೋಡಿನಿಂದ ಅನೇಕ ವಾಹನಗಳ ಕಳವು ನಡೆದಿದೆ. ಅದರಲ್ಲೂ ಬಿಸಿರೋಡಿನ ಒವರ್ ಬ್ರಿಡ್ಜ್ ನ ಅಡಿಭಾಗದಲ್ಲಿ ನಿಲ್ಲಿಸಲಾಗಿದ್ದ ಅನೇಕ ದ್ವಿಚಕ್ರ ವಾಹನಗಳ ಕಳವು ನಡೆದಿದ್ದು,ಇದರಲ್ಲಿ ‌ಕೇವಲ ಕೆಲವೇ ವಾಹನಗಳ ಪತ್ತೆಯಾಗಿದ್ದು ಬಿಟ್ಟರೆ ಉಳಿದ ವಾಹನಗಳ ಇನ್ನೂ ಕೂಡ ಪತ್ತೆಯಾಗಿಲ್ಲ.

ಕಳೆದ ಎಂಟು ವರ್ಷಗಳ ಹಿಂದೆ ವಾಮದಪದವು ದೇರೊಟ್ಟು ನಿವಾಸಿ ರಮೇಶ್ ಮೂಲ್ಯ ಅವರ ಫಲ್ಸರ್ ವಾಹನ ಕಳವಾಗಿತ್ತು. ಆದರೆ ಅದು ಇದುವರೆಗೂ ಪತ್ತೆಯಾಗಿಲ್ಲ.

ಬಂಟ್ವಾಳ ನಗರ ಠಾಣೆಯ ಕೂಗಳತೆಯ ದೂರದಲ್ಲಿ ಈ ರೀತಿಯಲ್ಲಿ ಹಾಡುಹಗಲೇ ಕಳವು ನಡೆಯುವುದು ಕಾನೂನು ಸುವ್ಯವಸ್ಥೆಗೆ ಕೆಟ್ಟ ಹೆಸರು ತರುವಂತದ್ದು, ಹಾಗಾಗಿ ಬಿ.ಸಿ.ರೋಡಿನ ಹೃದಯ ಭಾಗದಲ್ಲಾದರೂ ಉತ್ತಮ ಗುಣಮಟ್ಟದ ಸಿಸಿ ಕ್ಯಾಮರಾಗಳ ಅಳವಡಿಕೆ ಆಗಬೇಕಾಗಿದೆ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬಂದಿದೆ