ಸಾಂದರ್ಭಿಕ ಚಿತ್ರ

ಡೈಲಿ ವಾರ್ತೆ: 29/NOV/2023

ಚೀನಾದ ಮಕ್ಕಳಲ್ಲಿ ಹೆಚ್ಚುತ್ತಿರುವ ಉಸಿರಾಟದ ಕಾಯಿಲೆ: ಕರ್ನಾಟಕ ಸೇರಿ 5 ರಾಜ್ಯಗಳಿಗೆ ಎಚ್ಚರಿಕೆ ನೀಡಿದ ಕೇಂದ್ರ ಸರ್ಕಾರ!

ಚೀನಾದಲ್ಲಿ ಮಕ್ಕಳಲ್ಲಿ ಉಸಿರಾಟದ ಕಾಯಿಲೆಗಳ ಉಲ್ಬಣಗೊಂಡಿದ್ದು, ಇದೀಗ ಭಾರತದಲ್ಲೂ ಕೂಡ ಆತಂಕ ಸೃಷ್ಟಿಯಾಗಿದ್ದು, ಈ ಕಾರಣಕ್ಕೆ ಆರೋಗ್ಯ ಇಲಾಖೆ ರಾಜ್ಯಗಳಿಗೂ ಈ ಬಗ್ಗೆ ನಿರ್ದೇಶನ ನೀಡಿದೆ.
ಒಟ್ಟು ಆರು ರಾಜ್ಯಗಳಿಗೆ ಕೇಂದ್ರ ಸರ್ಕಾರ ಅಲರ್ಟ್ ಆಗಿರುವಂತೆ ಆದೇಶವನ್ನು ನೀಡಿದೆ.
ಈ ಎಲ್ಲ ಆರೋಗ್ಯ ಮೂಲಸೌಕರ್ಯಗಳನ್ನು ಪರಿಶೀಲನೆ ಮಾಡುವಂತೆ ಹಾಗೂ ಈಗಾಗಲೇ ಎಲ್ಲ ರೀತಿಯ ಪರೀಕ್ಷೆಗೂ ಸಿದ್ದತೆ ಮಾಡಿಕೊಳ್ಳವಂತೆ ಹೇಳಿದೆ.

ರಾಜಸ್ಥಾನ, ಕರ್ನಾಟಕ, ಗುಜರಾತ್, ಉತ್ತರಾಖಂಡ, ಹರಿಯಾಣ ಮತ್ತು ತಮಿಳುನಾಡು ರಾಜ್ಯ ಸರ್ಕಾರಗಳು ಉಸಿರಾಟದ ಸಮಸ್ಯೆಗಳ ಬಗ್ಗೆ ಕಟ್ಟೆಚ್ಚರ ವಹಿಸುವಂತೆ ಆದೇಶವನ್ನು ನೀಡಿದೆ. ಈ ರಾಜ್ಯದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿರುವವರ ಬಗ್ಗೆ ಹೆಚ್ಚಿನ ಕ್ರಮವಹಿಸುವಂತೆ ನಿರ್ದೇಶನದಲ್ಲಿ ತಿಳಿಸಿದೆ.

ಇನ್ನು ಈ ಬಗ್ಗೆ ಕರ್ನಾಟಕ ಆರೋಗ್ಯ ಇಲಾಖೆ ಕೂಡ ಹೆಚ್ಚಿನ ಜಾಗೃತೆಯನ್ನು ವಹಿಸಿಕೊಂಡಿದೆ. ಕಾಲೋಚಿತ ಜ್ವರದ ಬಗ್ಗೆ ನಾಗರಿಕರು ಜಾಗೃತರಾಗಿರಲು ಕೇಳಿಕೊಂಡಿದೆ. ಕಾಲೋಚಿತ ಜ್ವರದ ಲಕ್ಷಣಗಳು ಮತ್ತು ಅಪಾಯಕಾರಿ ಅಂಶಗಳನ್ನು ಬಗ್ಗೆ ಪಟ್ಟಿ ಮಾಡಿದೆ. ಕೆಮ್ಮುವಾಗ ಅಥವಾ ಸೀನುವಾಗ ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳುವುದು, ಆಗಾಗ್ಗೆ ಕೈಗಳನ್ನು ತೊಳೆಯುವುದು, ಮುಖವನ್ನು ಸ್ಪರ್ಶಿಸುವುದನ್ನು ತಪ್ಪಿಸುವುದು ಮತ್ತು ಕಿಕ್ಕಿರಿದ ಸ್ಥಳಗಳಲ್ಲಿ ಮಾಸ್ಕ್ ಬಳಸಬೇಕು ಎಂದು ಹೇಳಿದೆ.

ಇನ್ನು ರಾಜಸ್ಥಾನ ಆರೋಗ್ಯ ಇಲಾಖೆ ತಿಳಿಸಿರುವಂತೆ ರಾಜ್ಯದಲ್ಲಿ ಅಂತಹ ಯಾವುದೇ ಆತಂಕದ ಸ್ಥಿತಿ ಇಲ್ಲ. ಆದರೆ ವೈದ್ಯಕೀಯ ಸಿಬ್ಬಂದಿ ಜಾಗರೂಕರಾಗಿರಿ ಮತ್ತು ಸಾಂಕ್ರಾಮಿಕ ರೋಗಗಳು ಹರಡುವುದನ್ನು ತಡೆಯಬೇಕು. ಮಕ್ಕಳ ಘಟಕಗಳು ಮತ್ತು ಔಷಧ ವಿಭಾಗಗಳಲ್ಲಿ ಸಾಕಷ್ಟು ವ್ಯವಸ್ಥೆಗಳನ್ನು ಮಾಡಬೇಕು ಎಂದು ಹೇಳಿದ್ದಾರೆ.

ಗುಜರಾತ್‌ನ ಆರೋಗ್ಯ ಸಚಿವ ರುಶಿಕೇಶ್ ಪಟೇಲ್ ಅವರು COVID-19 ಸಾಂಕ್ರಾಮಿಕ ಸಮಯದಲ್ಲಿ ರಚಿಸಲಾದ ಆರೋಗ್ಯ ಮೂಲಸೌಕರ್ಯಗಳನ್ನೇ ಈಗ ಚೀನಾದಲ್ಲಿ ಉಂಟಾದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುನ್ನೆಚ್ಚರಿಕೆ ಕ್ರಮವಾಗಿ ಬಲಪಡಿಸಲಾಗುತ್ತಿದೆ ಎಂದು ಹೇಳಿದರು. ತಮ್ಮ ಸಿದ್ಧತೆಯನ್ನು ಪರಿಶೀಲಿಸುವಂತೆ ರಾಜ್ಯ ಸರ್ಕಾರವು ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿದೆ.

ಉತ್ತರಾಖಂಡ ಸರ್ಕಾರವು ಉಸಿರಾಟದ ಕಾಯಿಲೆಗಳ ಪ್ರಕರಣಗಳಿಗೆ ಕಣ್ಗಾವಲು ಹೆಚ್ಚಿಸುವಂತೆ ಆರೋಗ್ಯ ಅಧಿಕಾರಿಗಳಿಗೆ ನಿರ್ದೇಶನ ನೀಡಿದೆ. ಉತ್ತರಾಖಂಡದ ಮೂರು ಜಿಲ್ಲೆಗಳಾದ ಚಮೋಲಿ, ಉತ್ತರಕಾಶಿ ಮತ್ತು ಪಿಥೋರಗಢ ಚೀನಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. ಇಲ್ಲಿ ಹೆಚ್ಚಿನ ಎಚ್ಚರಿಕೆಯನ್ನು ವಹಿಸಲಾಗುವುದು ಎಂದು ಹೇಳಿದ್ದಾರೆ.

ಹರಿಯಾಣ ಆರೋಗ್ಯ ಇಲಾಖೆಯು ಕೂಡ ನಿರ್ದೇಶನವನ್ನು ಹೊರಡಿಸಿದೆ, ಸಾರ್ವಜನಿಕ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಅಸಾಧಾರಣ ಉಸಿರಾಟದ ಕಾಯಿಲೆಯು ಕಂಡುಬಂದರು, ಅದನ್ನು ತಕ್ಷಣವೇ ವರದಿ ಮಾಡಬೇಕು ಎಂದು ಹೇಳಿದೆ. ಇನ್ನು ತಮಿಳುನಾಡಿನಲ್ಲಿ, ರಾಜ್ಯ ಆರೋಗ್ಯ ಇಲಾಖೆಯು ಸಿದ್ಧತೆಗಳನ್ನು ಹೆಚ್ಚಿಸಲು ಕ್ರಮಗಳನ್ನು ತೆಗೆದುಕೊಳ್ಳುವುದರಿಂದ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಿಗೂ ನಿರ್ದೇಶನವನ್ನು ನೀಡಲಾಗಿದೆ.