ಡೈಲಿ ವಾರ್ತೆ: 01/DEC/2023

ಬೈಕ್ ಗೆ ಕ್ಯಾಂಟರ್ ಡಿಕ್ಕಿ:ಸ್ಥಳದಲ್ಲೇ ದಂಪತಿಗಳಿಬ್ಬರು ಮೃತ್ಯು !

ಬೆಂಗಳೂರು: ಗೃಹ ಪ್ರವೇಶ ಮುಗಿಸಿ ವಾಪಸ್ ಮನೆಗೆ ಬರುತ್ತಿದ್ದ ದಂಪತಿ ಭೀಕರ ಅಪಘಾತಕ್ಕೆ ಬಲಿಯಾದ ಘಟನೆ ಗುರುವಾರ ನೈಸ್ ರಸ್ತೆಯ ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟ ದುರ್ದೈವಿ ದಂಪತಿಗಳು ವಿಜಯನಗರದ ಹೊಸಹಳ್ಳಿ ಮೂಲದ ನಿರ್ಮಲಾ ಹಾಗೂ ಬೈಯಣ್ಣ ಎಂದು ತಿಳಿದುಬಂದಿದೆ.
ಇವರು ಹಾರಗದ್ದೆಯ ಸಂಬಂಧಿಕರೊಬ್ಬರ ಗೃಹ ಪ್ರವೇಶ ಮುಗಿಸಿ ಬೈಕ್ ನಲ್ಲಿ ಹಿಂತಿರುಗುವಾಗ ಮೂರು ಗಂಟೆ ಸುಮಾರಿಗೆ ನೈಸ್ ರಸ್ತೆಯ (NiceRoad) ವಜ್ರಮುನೇಶ್ವರ ಅಂಡರ್ ಪಾಸ್ ಬಳಿ ಅತಿವೇಗವಾಗಿ ಕ್ಯಾಂಟರ್ ಚಲಾಯಿಸಿಕೊಂಡು ಬಂದು ಹಿಂಬದಿಯಿಂದ ಇವರ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಬೈಕ್‌ನಲ್ಲಿದ್ದ ಬೈಯಣ್ಣ ದಂಪತಿ ಹಾರಿ ನೆಲಕ್ಕೆ ಅಪ್ಪಳಿಸಿದ್ರು. ಬೈಯಣ್ಣಗೆ ತಲೆಗೆ ಪೆಟ್ಟು ಬಿದ್ದು ರಕ್ತ ಸ್ರಾವವಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ರೆ, ಪತ್ನಿಯೂ ಕೂಡ ಬೋರಲಾಗಿ ಬಿದ್ದು ಪ್ರಾಣ ಬಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕ್ಯಾಂಟರ್ ಚಾಲಕ, ಕ್ಯಾಂಟರ್ ಬಿಟ್ಟು ಪರಾರಿಯಾಗಿದ್ದು ಈ ಸಂಬಂಧ ತಲಘಟ್ಟಪುರ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.