ಡೈಲಿ ವಾರ್ತೆ: 01/DEC/2023
ಡಿ. 3 – ಶ್ರೀ ಕ್ಷೇತ್ರ ಆನೆಗುಡ್ಡೆಯಲ್ಲಿ ರಾಜ್ಯ ಮಟ್ಟದ ಜೋಡಿ ಕುಣಿತ ಭಜನಾ ಸ್ಪರ್ಧೆ
ಕುಂದಾಪುರ : ಭಜನೆಯ ಮೂಲಕ ಭಗವಂತನ ಸಾಕ್ಷಾತ್ಕಾರ ಮಾಡಿಕೊಳ್ಳುವುದು ಸಾಧ್ಯ. ಜಾತಿ, ಮತದ ಬೇಧವಿಲ್ಲದೆ ಎಲ್ಲರಿಗೂ ದೇವರ ಒಲುಮೆ ಪಡೆಯಲು ಈ ನಾಮ ಸಂಕೀರ್ತನೆ ಸುಲಭ ವಿಧಾನ. ಈ ಭಜನಾ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪ್ರಸಿದ್ಧ ಪುಣ್ಯ ಕ್ಷೇತ್ರ ಆನೆಗುಡ್ಡೆಯಲ್ಲಿ ಡಿ. 3 ರ ಆದಿತ್ಯವಾರ ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧೆಯನ್ನು ಆಯೋಜಿಸಲಾಗಿದೆ ಎಂದು ಹಿರಿಯ ಧಾರ್ಮಿಕ ಮುಖಂಡ, ರಾಜ್ಯ ಮಟ್ಟದ ಕುಣಿತ ಭಜನಾ ಸ್ಪರ್ಧಾ ಸಮಿತಿಯ ಅಧ್ಯಕ್ಷ ಮಲ್ಯಾಡಿ ಶಿವರಾಮ ಶೆಟ್ಟಿ ಹೇಳಿದರು.
ಸ್ಪರ್ಧೆಯ ಪೂರ್ವಭಾವಿಯಾಗಿ ಆನೆಗುಡ್ಡೆ ಶ್ರೀ ವಿನಾಯಕ ದೇವಸ್ಥಾನದಲ್ಲಿ ಶುಕ್ರವಾರ ನಡೆದ ಪತ್ರಿಕಾ ಗೋಷ್ಠಿಯಲ್ಲಿ ಪಾಲ್ಗೊಂಡು ಅವರು ಸ್ಪರ್ಧೆಯ ಬಗ್ಗೆ ವಿವರ ನೀಡಿದರು.
ದೇವಾಲಯದ ಅನುವಂಶಿಕ ಆಡಳಿತ ಧರ್ಮದರ್ಶಿ ಶ್ರೀರಮಣ ಉಪಾಧ್ಯಾಯ ಮಾತನಾಡಿ, ಸಮಾಜದಲ್ಲಿ ಧಾರ್ಮಿಕತೆಯ ಉದ್ದೀಪನಕ್ಕಾಗಿ, ದಾಸ ಸಾಹಿತ್ಯದ ಶ್ರೀಮಂತಿಕೆಯ ಪರಿಚಯಕ್ಕಾಗಿ ಹಾಗೂ ಶ್ರೇಷ್ಠ ಭಜನಾ ಸಂಸ್ಕೃತಿಯನ್ನು ಉಳಿಸುವುದಕ್ಕಾಗಿ ದೇವಸ್ಥಾನದ ಆಶ್ರಯದಲ್ಲಿ ಸಾರ್ವಜನಿಕರ ಸಹಭಾಗಿತ್ವದಲ್ಲಿ ಈ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ರಾಜ್ಯಾದ್ಯ0ತದಿಂದ 90 ಕ್ಕೂ ಹೆಚ್ಚು ಭಜನಾ ತಂಡಗಳಿಂದ ಉಮೇದುವಾರಿಕೆ ಬಂದಿದ್ದು, ವಿಡಿಯೋ ಕ್ಲಿಪ್ ಗಳನ್ನು ಸಮಿತಿಯವರು ನೋಡಿ, ಅಂತಿಮವಾಗಿ 48 ತಂಡಗಳನ್ನು ಆಯ್ಕೆ ಮಾಡಲಾಗಿದೆ ಎಂಬ ವಿವರಗಳನ್ನು ನೀಡಿದರು.
ಶ್ರೀ ರಾಮ ಕೋಟೀಶ್ವರ ಕಲಾ ಸಂಘದ ಅಧ್ಯಕ್ಷ ಬಿ. ಜಿ. ಸೀತಾರಾಮ ಧನ್ಯ, ಈ ಭಾಗದಲ್ಲೇ ಅತಿ ವಿಶಿಷ್ಟವಾದ ಜೋಡಿ ಕುಣಿತ ಭಜನಾ ಸ್ಪರ್ಧೆ ಇದು. ಏಕ ಕಾಲದಲ್ಲಿ ಎರಡೂ ವೇದಿಕೆಗಳಲ್ಲಿ ಸ್ಪರ್ಧೆಗಳು ನಡೆಯುತ್ತಿರುತ್ತವೆ. ದಾಸ ಸಾಹಿತ್ಯದ ಹಾಡುಗಳನ್ನು ಈಗ ಬಹಿರಂಗಪಡಿಸಿಲ್ಲ. ಸ್ಪರ್ಧೆಯ ವೇಳೆ ಹಾಡು ತಿಳಿಸಲಾಗುವುದು. ಇದಕ್ಕೆ ನಾಲ್ವರು ಗಾಯಕರು, ಪಕ್ಕವಾದ್ಯ ವ್ಯವಸ್ಥೆ ಮಾಡಲಾಗಿದೆ. ಈ ಹಾಡುಗಳಿಗೆ ತಂಡಗಳು ನಿರ್ವಹಿಸುವ ಕುಣಿತ, ಹಾವ – ಭಾವ, ಸಮವಸ್ತ್ರ, ತಾಳಗಳನ್ನು ಅನುಲಕ್ಷಿಸಿ ತೀರ್ಪುಗಾರರು ಅಂಕ ನೀಡುತ್ತಾರೆ ಎಂಬಿತ್ಯಾದಿ ಮಾಹಿತಿ ನೀಡಿದರು.
ರಾಜ್ಯ ಮಟ್ಟದ ಭಜನಾ ಸಂಘಟಕ ರಾಘವೇಂದ್ರ ಶೆಟ್ಟಿಗಾರ್ ಮಾಹಿತಿ ನೀಡಿ, ಅಂತಿಮ ಸುತ್ತಿನಲ್ಲಿ ವಿಜೇತ ತಂಡಗಳಿಗೆ ಆಕರ್ಷಕ ಬಹುಮಾನ ನೀಡಲಾಗುತ್ತಿದೆ. ಭಾಗವಹಿಸಿದ ಎಲ್ಲಾ ತಂಡಗಳಿಗೂ ಗೌರವ ಸಂಭಾವನೆ ನೀಡಲಾಗುತ್ತದೆ ಎಂದರು. ಸುಮಾರು ಐದು ಲಕ್ಷ ರೂಪಾಯಿಗಳಿಗೂ ಮಿಕ್ಕಿ ಖರ್ಚು ಬರುತ್ತಿದ್ದು, ಸಹೃದಯ ದಾನಿಗಳು ಸಹಕರಿಸಬೇಕು ಎಂದು ಮನವಿ ಮಾಡಿದರು.
ಅಂದು ಬೆಳಿಗ್ಗೆ ಎಂಟು ಗಂಟೆಗೆ ಸುರತ್ಕಲ್ ಚಿತ್ರಾಪುರ ಮಠಾಧೀಶ ಶ್ರೀ ವಿದ್ಯೇ0ದ್ರ ತೀರ್ಥ ಸ್ವಾಮಿಗಳನ್ನು ಪೂರ್ಣಕುಂಭ ಸ್ವಾಗತದೊಂದಿಗೆ ಆನೆಗುಡ್ಡೆ ಕ್ಷೆತ್ರಕ್ಕೆ ಬರಮಾಡಿಕೊಳ್ಳಲಾಗುವುದು. 9 ಗಂಟೆಗೆ ಸ್ವಾಮಿಗಳು ಭಜನಾ ಸ್ಪರ್ಧೆಯನ್ನು ಉದ್ಘಾಟಿಸಿ ಆಶೀರ್ವಚನ ನೀಡುವರು. ಆನೆಗುಡ್ಡೆ ದೇವಳದ ವಿಶ್ರಾಂತ ಆಡಳಿತ ಧರ್ಮದರ್ಶಿ ಕೆ. ಸೂರ್ಯನಾರಾಯಣ ಉಪಾಧ್ಯಾಯ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸುವರು. ಹಿರಿಯ ಧಾರ್ಮಿಕ ಮುಂದಾಳು ಬಿ. ಅಪ್ಪಣ್ಣ ಹೆಗ್ಡೆ ಸಹಿತ ಇನ್ನಿತರ ಗಣ್ಯರು ಪಾಲ್ಗೊಳ್ಳುವರು. ಬೆಳಿಗ್ಗೆ 10 ಗಂಟೆಗೆ ಭಕ್ತಿಗಾನ ನೃತ್ಯ ಜೋಡಿ ಭಜನಾ ಸ್ಪರ್ಧೆ ಆರಂಭಗೊಳ್ಳುವುದು. ಸಂಜೆ 7.30ಕ್ಕೆ ಕೋಟ ಶ್ರೀ ಅಮೃತೇಶ್ವರೀ ದೇಗುಲದ ಆಡಳಿತ ಧರ್ಮದರ್ಶಿ ಆನಂದ ಸಿ. ಕುಂದರ್ ಅಧ್ಯಕ್ಷತೆ ಹಾಗೂ ಶಾಸಕ ಕಿರಣ್ ಕುಮಾರ್ ಕೊಡ್ಗಿ ಇನ್ನಿತರ ಗಣ್ಯರ ಉಪಸ್ಥಿತಿಯಲ್ಲಿ ನಡೆಯುವ ಸಮಾರೋಪ ಸಮಾರಂಭದಲ್ಲಿ ವಿಜೇತ ತಂಡಗಳಿಗೆ ಪ್ರಶಸ್ತಿಯನ್ನು ಹಸ್ತಾಂತರಿಸಲಾಗುವುದು. ಹಿರಿಯ ಭಜನಾ ಸಂಘಟಕ ಬಾಬಣ್ಣ ಪೂಜಾರಿ ಸ್ವಾಗತಿಸಿ, ಕೊನೆಯಲ್ಲಿ ವಂದಿಸಿದರು. ದೇವಳದ ಮ್ಯಾನೇಜರ್ ನಟೇಶ್ ಕಾರಂತ ಉಪಸ್ಥಿತರಿದ್ದರು.