ಡೈಲಿ ವಾರ್ತೆ: 05/DEC/2023
ರಮೇಶ್ ಜಾರಕಿಹೊಳಿ ಆಪ್ತ ಪೃಥ್ವಿ ಸಿಂಗ್ ಗೆ ಚಾಕು ಇರಿತ ಪ್ರಕರಣ: ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರನಿಂದ ಕೃತ್ಯ ಆರೋಪ.!
ಬೆಳಗಾವಿ: ಬಿಜೆಪಿ ರಾಜ್ಯಕಾರ್ಯಕಾರಣಿ ಸದಸ್ಯ ಪೃಥ್ವಿ ಸಿಂಗ್ ಮೇಲೆ ಚಾಕು ಇರಿತವಾಗಿದ್ದು. ಮಾಜಿ ಸಚಿವ ರಮೇಶ್ ಜಾರಕಿಹೊಳಿ ಪರಮಾಪ್ತರಾಗಿರುವ ಪೃಥ್ವಿ ಸಿಂಗ್ ಮೇಲೆ, ಎಂಎಲ್‌ಸಿ, ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಚನ್ನರಾಜ್ ಹಟ್ಟಿಹೊಳ್ಳಿ ಆಪ್ತರು ಈ ಮಾರಣಾಂತಿಕ ಹಲ್ಲೆ ನಡೆಸಿರುವ ಗಂಭೀರ ಆರೋಪ ಕೇಳಿಬಂದಿದೆ.
ಸದ್ದಾಂ, ಸುಜಯ್ ಜಾಧವ್ ಮತ್ತು ಚನ್ನರಾಜ್ ಅವರು ಪೃಥ್ವಿ ಸಿಂಗ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಬಂದಿದೆ. ಸಂಜೆ ಪೃಥ್ವಿ ಸಿಂಗ್ ಮನೆಗೆ ಏಕಾಏಕಿ ಬಂದ ಆರೋಪಿಗಳು ಕೆಲಹೊತ್ತು ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ನೇರವಾಗಿ ಚಾಕುವಿನಿಂದ ಹಲ್ಲೆಗೆ ಮುಂದಾಗಿರುವ ಆರೋಪ ಕೇಳಿಬಂದಿದೆ. ಸದ್ಯ ಪೃಥ್ವಿ ಸಿಂಗ್‌ಗೆ ಕೆಎಲ್‌ಇ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಸುದ್ದಿ ತಿಳಿದು ಬಿಜೆಪಿ ರಾಜ್ಯಾಧ್ಯಕ್ಷ ಬಿವೈ ವಿಜಯೇಂದ್ರ, ಎಂಎಲ್‌ಸಿ ಛಲವಾದಿ ನಾರಾಯಣಸ್ವಾಮಿ, ಮಾಜಿ ಶಾಸಕ ಸಂಜಯ್ ಪಾಟೀಲ್ ಸೇರಿದಂತೆ ಹಲವು ಮುಖಂಡರು ಆಸ್ಪತ್ರೆಗೆ ಭೇಟಿ ಪೃಥ್ವಿ ಸಿಂಗ್ ಆರೋಗ್ಯ ವಿಚಾರಿಸಿದ್ದಾರೆ. ಬಳಿಕ ಮಾತನಾಡಿದ ಬಿವೈ ವಿಜಯೇಂದ್ರ ಸಿಎಂ, ಡಿಸಿಎಂ ಗೃಹ ಸಚಿವರು ಬೆಳಗಾವಿಯಲ್ಲಿ ಇರುವಾಗಲೇ ಈ ರೀತಿ ಘಟನೆ ನಡೆದಿದೆ. ಇದನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೆವೆ. ಘಟನೆ ನಡೆಯುವಾಗ ಲಕ್ಷ್ಮಿ ಹೆಬ್ಬಾಳ್ಕರ್ ಸಹೋದರ ಹಾಗೂ ಎಂಎಲ್‌ಸಿ ಚನ್ನರಾಜ್ ಸ್ಥಳದಲ್ಲಿ ಇರುವ ಮಾಹಿತಿಯಿದೆ. ಇಂದು ರಾತ್ರಿಯೇ ಆರೋಪಿಗಳ ಬಂಧನವಾಗಬೇಕು ಇಲ್ಲದಿದ್ದರೆ ಬಿಜೆಪಿ ಕಾರ್ಯಕರ್ತರು ರಸ್ತೆಗಿಳಿಯುತ್ತಾರೆ ಎಂದು ಎಚ್ಚರಿಕೆ ನೀಡಿದರು.
ಘಟನೆ ಬಗ್ಗೆ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಸಹ ಪ್ರತಿಕ್ರಿಯೆ ನೀಡಿದ್ದು, ನಾನು ನನ್ನ ಸಹೋದರನ ಜೊತೆಗೆ ಮಾತನಾಡಿ ಘಟನೆ ಬಗ್ಗೆ ಮಾಹಿತಿ ಪಡೆದಿದ್ದೇನೆ. ಈ ಬಗ್ಗೆ ಸತ್ಯಾಸತ್ಯತೆ ಗೊತ್ತಾಗಬೇಕು. ಇದರ ಹಿಂದೆ ಯಾರು ಇದ್ದಾರೆ? ಇದು ಷಡ್ಯಂತ್ರವೋ, ರಾಜಕೀಯ ಪ್ರೇರಿತವೋ ಎಂದು ಗೊತ್ತಾಗಬೇಕು. ಈ ಬಗ್ಗೆ ಪೃಥ್ವಿ ಸಿಂಗ್ ದೂರು ನೀಡಲಿ. ಪೊಲೀಸರು ಆರೋಪಿಗಳನ್ನು ಬಂಧನ ಮಾಡುತ್ತಾರೆ ಎಂದರು. ಇನ್ನೊಂದೆಡೆ ಹಲ್ಲೆ ಬಗ್ಗೆ ಪ್ರತಿಕ್ರಿಯಿಸಿದ ಗೃಹ ಸಚಿವ ಪರಮೇಶ್ವರ್, ಏನೇ ಇದ್ದರೂ ನಮ್ಮ ಪೊಲೀಸರು ನೋಡಿಕೊಳ್ಳುತ್ತಾರೆ. ಯಾರೇ ಭಾಗಿಯಾಗಿದ್ದರೂ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಹೇಳಿದರು.